
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.02:- ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ. ಪರಿಶ್ರಮ ಪಟ್ಟರೆ ಯಶಸ್ಸು ಸಾಧ್ಯವಾಗಲಿದ್ದು, ಉತ್ತಮ ಜೀವನ ರೂಪಿಸಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.
ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಲಾಗಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ವಿತರಿಸಿ ಸ್ವಾಗತಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರಿಶ್ರಮಪಟ್ಟರೆ ವಿದ್ಯಾರ್ಥಿ ಜೀವನ ಯಶಸ್ವಿಯಾಗಲಿದೆ. ನಿಮ್ಮಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು. ಕಲಿಯುವ ಆಸಕ್ತಿ ನಿಮ್ಮಲ್ಲಿ ನಿರಂತರವಾಗಿರಲಿ. ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನಕ್ಕೆ ಆದ್ಯತೆ ಇರಲಿ ಎಂದು ಜಿಲ್ಲಾಧಿಕಾರಿಗಳು ಕಿವಿಮಾತು ಹೇಳಿದರು.
ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆ ಮಾನವೀಯ ಮೌಲ್ಯಗಳನ್ನು ಹೇಳಿಕೊಡಬೇಕು. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ.
ಪೋಷಕರ ನಂಬಿಕೆ ವಿಶ್ವಾಸಕ್ಕೆ ವಿದ್ಯಾರ್ಥಿಗಳು ಧಕ್ಕೆ ಬಾರದಂತೆ ಉನ್ನತ ಸಾಧನೆ ಮಾಡಬೇಕು. ಶಿಸ್ತಿನ ಜೀವನ ರೂಪಿಸಿಕೊಂಡು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಪ್ರಸಕ್ತ ಶೈಕ್ಷಣಿಕ ಅವಧಿಯ ಆರಂಭದಲ್ಲಿಯೇ ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗೆ ಬಂದಿದ್ದಾರೆ.
ಇದು ಮುಂದಿನ ಯಶಸ್ಸಿಗೆ ಬುನಾದಿಯಾಗಲಿದೆ ಎಂಬ ವಿಶ್ವಾಸ ಕಂಡು ಬರುತ್ತಿದೆ. ಎಸ್.ಎಸ್.ಎಲ್.ಸಿಯ 1 ಮತ್ತು 2ರ ಪರೀಕ್ಷೆಗಳಲ್ಲಿ ಶೇ. 97ರಷ್ಟು ಫಲಿತಾಂಶ ಜಿಲ್ಲೆಗೆ ಬಂದಿದೆ. ಮುಂದಿನ ಫಲಿತಾಂಶ ಶೇ. 100ರಷ್ಟು ಆಗಲಿ ಎಂಬುದು ತಮ್ಮ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಹಾಜರಾಗಬೇಕು.
ಓದಿನಲ್ಲಿ ಆಸಕ್ತಿ ತೋರಿ ಶಾಲೆಯ ಫಲಿತಾಂಶವನ್ನು ಸುಧಾರಣೆ ಮಾಡಬೇಕು. ಬೇರೆ ಶಾಲೆಗಳಿಗಿಂತ ನಮ್ಮ ಶಾಲೆ ಅಗ್ರಸ್ಥಾನದಲ್ಲಿ ಇರಬೇಕು ಎಂಬ ಮಹತ್ವಾಕಾಂಕ್ಷೆ ವಿದ್ಯಾರ್ಥಿಗಳಲ್ಲಿ ಇರಬೇಕು. ಶಾಲಾ ಪ್ರಾರಂಭೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ವಿತರಿಸಿದರು. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಲಿಖಿತ್, ಚರಣ್, ಯಶವಂತ್ ಅವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಸಾರೋಟಿನಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆತರಲಾಯಿತು. ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪಾಟಿಲ್, ಇತರೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಗುಲಾಬಿ ಹೂ, ಸಿಹಿ ನೀಡಿ ಸ್ವಾಗತಿಸಿದರು.
ಬಳಿಕ ಶತಮಾನ ಪೂರೈಸಿದ ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಭಾಗವಹಿಸಿ ಮಕ್ಕಳಿಗೆ ಪುಷ್ಪವೃಷ್ಟಿಗರೆದು, ಸಿಹಿ ನೀಡಿ ಸಂಭ್ರಮದಿಂದ ಬರ ಮಾಡಿಕೊಂಡರು. ಕೇಕ್ ಕತ್ತರಿಸಿ ಮಕ್ಕಳಿಗೆ ವಿತರಿಸಿದರು. ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು. ಎಲ್.ಕೆ.ಜಿ ಪ್ರಾರಂಭೋತ್ಸವವನ್ನು ನೆರವೇರಿಸಿದರು.
ಶಾಲೆ ಆವರಣಕ್ಕೆ ಸುಣ್ಣ ಬಣ್ಣ ಹೊಡೆದು ಕೊಠಡಿಗಳಲ್ಲಿ ಚಿತ್ರಕಲೆ ಬಿಡಿಸುವ ಕಾರ್ಯ ನೆರವೇರಿಸಿರುವ ರೋಟರಿ ಸಿಲ್ಕ್ ಸಿಟಿ, ಗುಡ್ ಹ್ಯಾಬಿಟ್ ಫೌಂಡೇಶನ್, ಹಸಿರು ಪಡೆ, ಶ್ರೀ ಬಸವರಾಜೇಂದ್ರ ಆಸ್ಪತ್ರೆ, ಇತರೆ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಡಾ. ಬಸವರಾಜೆಂದ್ರ, ಡಾ. ಶ್ವೇತಾ, ಡಿ.ಎಸ್. ಗಿರೀಶ್, ಶಮಿತ್ ಕುಮಾರ್, ಮನೋಜ್ ಕುಮಾರ್, ಸಂತೋಷ್ ಕುಮಾರ್, ಶರತ್ ಸುಂದರ್, ಮಣಿಕಂಠಸ್ವಾಮಿ, ಶ್ರೀಧರ್, ಮಣಿಕ್ಯಾ ಸಿರ್ವಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕÀ ಚಂದ್ರಪಾಟಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಶೆಟ್ಟಿ, ಪ್ರಾಂಶುಪಾಲರಾದ ನಾರಾಯಣ, ಬಿ.ಆರ್.ಸಿ. ರಾಜು, ನಿವೃತ್ತ ಪ್ರಾಂಶುಪಾಲ ಸೋಮಣ್ಣ, ಇತರರು ಇದ್ದರು.

































