
ಬಹುನಿರೀಕ್ಷಿತ “ಟಾಸ್” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ
ಮಂಗಳೂರು: ಅವಿಕಾ ಪ್ರೊಡಕ್ಷನ್ ಮತ್ತು ಬಿಆರ್ ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಅರ್ಜುನ್ ದೇವ್ ನಿರ್ದೇಶನ, ನಟನೆಯ “ಟಾಸ್” ತುಳು ಸಿನಿಮಾ ಬಿಗ್ ಸಿನೆಮಾಸ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿ ಮಾತಾಡಿ, “ಇಂದು ಎರಡು ವಿಶೇಷ ದಿನವಾಗಿದೆ. ಒಂದೆಡೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿದ್ದರೆ ಇನ್ನೊಂದೆಡೆ ತುಳು ಭಾಷೆಯ ಬಹು ನಿರೀಕ್ಷಿತ ಸಿನಿಮಾ “ಟಾಸ್” ಬಿಡುಗಡೆಯಾಗುತ್ತಿದೆ. ಡಾ ದೇವದಾಸ್ ಕಾಪಿಕಾಡ್ ಅವರು ನಮಗೆಲ್ಲ ಹೀರೋ ಇದ್ದಂತೆ. ಅವರು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ, ಹಾಗೆಯೇ ಈ ಸಿನಿಮಾ ಕೂಡ ಕಾಂತಾರದಂತೆ ಯಶಸ್ಸು ಕಾಣಲಿ“ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತಾಡಿ, ”ಇಂದು ರಂಗಭೂಮಿಯ ಹಿರಿಯ ಕಲಾವಿದ ಡಾ ದೇವದಾಸ್ ಕಾಪಿಕಾಡ್ ಅವರ “ಟಾಸ್” ಸಿನಿಮಾ ಬಿಡುಗಡೆಯಾಗುತ್ತಿದೆ. ತುಳುವರು ಎಲ್ಲರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿದರೆ ಒಂದೊಳ್ಳೆ ಸಿನಿಮಾ ಗೆಲ್ಲುತ್ತದೆ“ ಎಂದರು.
ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, “ಟಾಸ್ ಸಿನಿಮಾ ಕಾಪಿಕಾಡ್ ರವರಿಗೆ ಕಾಸ್ ಮಾಡಿಕೊಡಲಿ. ತುಳುವರಿಗೆ ಸಮಸ್ತ ತುಳುನಾಡಿಗೆ ಈ ಸಿನಿಮಾ ಹೆಸರು ಮಾಡಲಿ. ಅರ್ಜುನ್ ದೇವ್ ನಟನೆ ನಿರ್ದೇಶನದ ಈ ಸಿನಿಮಾ ಕನ್ನಡ ಮತ್ತು ತುಳುಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ವಿಚಾರ” ಎಂದರು.
ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, “ಸಿನಿಮಾದ ಪ್ರೀಮಿಯರ್ ಶೋ ನೋಡಿದವರೆಲ್ಲ ಸಿನಿಮಾವನ್ನು ಹೊಗಳುತ್ತಿದ್ದಾರೆ. ಸಿನಿಮಾ ಒಳ್ಳೆಯ ಹೆಸರು ಮಾಡಲಿ” ಎಂದು ಶುಭ ಹಾರೈಸಿದರು.
ಡಾ ಶಿವಶರಣ್ ಶೆಟ್ಟಿ ಮಾತಾಡಿ, “ಅರ್ಜುನ್ ಕಾಪಿಕಾಡ್ ಈ ಸಿನಿಮಾಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಅವರಿಗೆ ಯಶಸ್ಸು ಸಿಗಲಿ” ಎಂದರು.
ಡಾ.ದೇವದಾಸ್ ಕಾಪಿಕಾಡ್, ಕದ್ರಿ ಮಣಿಕಾಂತ್, ಭೋಜರಾಜ ವಾಮಂಜೂರು, ಶರ್ಮಿಳಾ ಡಿ ಕಾಪಿಕಾಡ್, ವೀರೇಂದ್ರ ಶೆಟ್ಟಿ ಕಾವೂರು, ಗಿರೀಶ್ ಎಂ ಶೆಟ್ಟಿ ಕಟೀಲು, ಪ್ರಕಾಶ್ ತೂಮಿನಾಡ್, ಪುಷ್ಪರಾಜದ ಬೊಳ್ಳಾರ್, ಕಿಶೋರ್ ಕೊಟ್ಡಾರಿ, ರಾಕೇಶ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಮುಖೇಶ್ ಹೆಗ್ಡೆ, ಚಂದ್ರಹಾಸ ಶೆಟ್ಟಿ ರಂಗೋಲಿ, ಬಾಳ ಜಗನ್ನಾಥ ಶೆಟ್ಟಿ, ದಿನೇಶ್ ಶೆಟ್ಟಿ, ಫಯಾಜ್ ಅಭ್ದುಲ್ ರಝಾಕ್ ದುಬಾಯಿ, ಇಝಾಕ್ ಚೈತ್ರ ಶೆಟ್ಟಿ, ಸದಾಶಿವ ಅಮೀನ್, ಜೋಯಲ್ ಡಿ ಸೋಜ, ರೋಶನ್ ಶೆಟ್ಟಿ, ಚೈತ್ರಾ ಶೆಟ್ಟಿ, ಶೈಲಶ್ರೀ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು. ಜಿತೇಶ್ ಉಳಿಯ ಕಾರ್ಯಕ್ರಮ ನಿರ್ವಹಿಸಿದರು.
ಟಾಸ್ ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ದೇರಳಕಟ್ಟೆ, ಸುಳ್ಯ ಬೆಳ್ತಂಗಡಿ, ಪುತ್ರೂರು, ಸುಳ್ಯ ಸಹಿತ ಬೇರೆ ಬೇರೆ ಕಡೆಗಳಲ್ಲಿ ಬಿಡುಗಡೆಗೊಂಡಿದೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲೂ ಸಿನಿಮಾ ಬಿಡುಗಡೆಯಾಗಿದೆ.
ಇದೊಂದು ಪಕ್ಕಾ ಕಾಮಿಡಿ ಸಿನಿಮಾ, ಸೆಂಟಿಮೆಂಟ್, ಆ?ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್, ಎಲ್ಲಾ ಚಿಂತೆಗಳನ್ನು ಬಿಟ್ಟು ಎಂಜಾಯ್ ಮಾಡಬೇಕೆಂದು ರೆಡಿ ಮಾಡಿರುವ ಸಿನಿಮಾ ಇದು. ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಏನೇನು ಬೇಕೋ ಎಲ್ಲವೂ “ಟಾಸ್” ಸಿನಿಮಾದಲ್ಲಿದೆ ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದ್ದಾರೆ.
































