
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.14: ಜೆಡಿಎಸ್ ಬಣ ರಾಜಕೀಯದ ಪ್ರತಿಷ್ಠಗೆ ಸಿಲುಕಿದ್ದ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಶಾಸಕ ಹೆಚ್.ಟಿ.ಮಂಜು ಬೆಂಬಲಿತ ಜೆಡಿಎಸ್ ನಿಷ್ಠ 09 ಅಭ್ಯರ್ಥಿಗಳು ಜಯಗಳಿಸುವ ಮೂಲಕ ಶಾಸಕ ಹೆಚ್.ಟಿ.ಮಂಜು ಅವರ ಪ್ರತಿಷ್ಠೆಯನ್ನು ಎತ್ತಿ ಹಿಡಿದಿದ್ದಾರೆ.
ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ 12 ಸ್ಥಾನಗಳಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಒಂದು ಸ್ಥಾನಕ್ಕೆ ಶಾಸಕ ಹೆಚ್.ಟಿ.ಮಂಜು ಬೆಂಬಲಿತ ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11 ಸ್ಥಾನಗಳಿಗೆ ಭಾನುವಾರ (ಜುಲೈ 12) ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಶಾಸಕ ಹೆಚ್.ಟಿ.ಮಂಜು ಬಣದ ದುಗ್ಗನಹಳ್ಳಿ ನಾಗೇಶ್, ದನೇಶ್, ಶ್ಯಾರಹಳ್ಳಿ ಎಸ್.ಕೆ.ಗಂಗಾಧರ್, ಕೈಗೋನಹಳ್ಳಿ ಕೆ.ಕೆ.ನಂಜೇಗೌಡ, ಸುಕನ್ಯಾ ಪುಟ್ಟೇಗೌಡ, ನಾಗರಾಜೇಗೌಡ, ಸಾರಂಗಿ ಗಂಗಾಧರ್, ಚಿಕ್ಕಯ್ಯ ಜಯಗಳಿಸಿದ್ದರೆ ಡಾಲು ರವಿ ಬಣದಿಂದ ಜಾಗಿನಕೆರೆ ಅಶೋಕ್, ವಿಶ್ವನಾಥ್, ಸಿ.ಎನ್ ಪುಷ್ಪ ಮಂಜೇಗೌಡ ಜಯಗಳಿಸಿದ್ದು ಸಾರಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶಾಸಕ ಹೆಚ್.ಟಿ.ಮಂಜು ಬಣದ ಪಾಲಾಗಿದೆ.
ಸಾರಂಗಿ ಗ್ರಾಮ ಮಾಜಿ ಸಚಿವ ಬಿಜೆಪಿಯ ಕೆ.ಸಿ.ನಾರಾಯಣಗೌಡ ಮತ್ತು ಮನ್ ಮುಲ್ ನಿರ್ದೇಶಕ ಡಾಲು ರವಿ ಅವರ ಸ್ವಗ್ರಾಮ ಕೈಗೋನಹಳ್ಳಿ ವ್ಯಾಪ್ತಿಗೆ ಸೇರುತ್ತದೆ. ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮತ್ತು ಡಾಲು ರವಿ ಒಗ್ಗೂಡಿ ಶಾಸಕರ ಬಣದ ವಿರುದ್ದ ತೊಡೆ ತಟ್ಟಿದ್ದರು. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್ ಚಲುವರಾಯಸ್ವಾಮಿ ಕೂಡ ಶಾಸಕ ಹೆಚ್.ಟಿ.ಮಂಜು ಪಡೆಯ ವಿರುದ್ದ ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕೈಯಾಡಿಸಿದ್ದರು. ಇದರಿಂದಾಗಿ ಸಾರಂಗಿ ಕೃಷಿ ಪತ್ತಿನ ಚುನಾವಣೆ ಶಾಸಕ ಹೆಚ್.ಟಿ.ಮಂಜು ವರ್ಸಸ್ ನಾರಾಯಣಗೌಡ ಹಾಗೂ ಡಾಲು ರವಿ ಎನ್ನುವಂತೆ ಬಿಂಬಿತವಾಗಿದ್ದು ತಾಲೂಕಿನಾದ್ಯಂತ ಕುತೂಹಲ ಕೆರಳಿಸಿತ್ತು. ಇದಕ್ಕೆ ಪೂರಕ ಎನ್ನುವಂತೆ ಜೆಡಿಎಸ್ ನಿಷ್ಠ ಮತ್ತು ಬಂಡಾಯಗಾರರ ಹೆಸರಿನಲ್ಲಿ ಪರ ವಿರೋಧ ಕೆಸರೆರಚಾಟಗಳೂ ನಡೆದಿದ್ದವು.
ಮೂಲತಃ ಕಾಂಗ್ರಸ್ಸಿಗರಾಗಿದ್ದ ಡಾಲು ರವಿ ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಶಾಸಕ ಹೆಚ್.ಟಿ.ಮಂಜು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನಂತರ ನಡೆದ ಮನ್ ಮುಲ್ ಚುನಾವಣೆಯ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು ವಿರುದ್ದ ಸಿಡಿದು ನಿಂತಿರುವ ಮನ್ ಮುಲ್ ನಿರ್ದೇಶಕ ಡಾಲು ರವಿ ತಮ್ಮದೇ ಬಣ ರಚಿಸಿಕೊಂಡು ಶಾಸಕ ಹೆಚ್.ಟಿ.ಮಂಜು ವಿರುದ್ದ ಕ್ಷೇತ್ರದಲ್ಲಿ ಸಮರ ಸಾರಿದ್ದಾರೆ. ಡಾಲು ರವಿಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ಬಣದ ಬೆಂಬಲವಿದೆ. ಇದರ ಜೊತೆಗೆ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಎ.ಎನ್.ಜಾನಕೀರಾಂ ಸೇರಿದಂತೆ ಹಲವರು ಡಾಲು ರವಿ ಜೊತೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಪರ ಕೆಲಸ ಮಾಡುತ್ತಿರುವ ಡಾಲು ರವಿ ಜೆಡಿಎಸ್ ಪಕ್ಷದ ಪರ ಇಲ್ಲ. ಅವರನ್ನು ಜೆಡಿಎಸ್ ಪಕ್ಷ ಒಪ್ಪುವುದಿಲ್ಲ ಎಂದು ಶಾಸಕರ ಬೆಂಬಲಿಗರ ಪಡೆ ಬಹಿರಂಗವಾಗಿಯೇ ಹೇಳುತ್ತಿದ್ದರೆ ಡಾಲು ಮಾತ್ರ ನಾನು ಜೆಡಿಎಸ್ ತ್ಯಜಿಸಿಲ್ಲ. ನಾನು ಜೆಡಿಎಸ್ ಪಕ್ಷದಲ್ಲಿ ಇಲ್ಲ ಎನ್ನುವುದನ್ನು ಜೆಡಿಎಸ್ ವರಿಷ್ಠರು ಹೇಳಬೇಕು ಎನ್ನುತ್ತಾ ಸಾರಂಗಿ ಚುನಾವಣೆಯಲ್ಲಿ ತಮ್ಮದೇ ಪಡೆಯ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದರು. ಇದರಿಂದಾಗಿ ತಾಲೂಕು ಜೆಡಿಎಸ್ ಪಕ್ಷದಲ್ಲಿ ಪರ ವಿರೋಧ ಗುಂಪುಗಳಿದ್ದು ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎರಡೂ ಬಣಗಳು ಪ್ರತಿಷ್ಠೆಯ ಹೋರಾಟಕ್ಕಿಳಿದಿದ್ದವು. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದಿಂದ ಟಿಕೆಟ್ ಆಕಂಕ್ಷಿಯಾಗಿರುವ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಬಣ ಕೂಡ ಡಾಲು ರವಿ ಬೆಂಬಲಕ್ಕೆ ನಿಂತಿತ್ತು. ಆದರೆ ಸಾರಂಗಿ ವ್ಯಾಪ್ತಿಯ ಸಹಕಾರ ಸಂಘದ ಮತದಾರರು ಶಾಸಕ ಹೆಚ್.ಟಿ.ಮಂಜು ಬಣಕ್ಕೆ ಅಭೂತ ಪೂರ್ವ ಬೆಂಬಲ ನೀಡಿ ಜೆಡಿಎಸ್ ನಿಷ್ಠ ಬಣಕ್ಕೆ ಅಧಿಕಾರ ನೀಡಿದ್ದಾರೆ.
ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ವಿಜೇತರಾದ ತಮ್ಮ ಬೆಂಬಲಿಗರ ಪಡೆಯನ್ನು ಶಾಸಕ ಹೆಚ್.ಟಿ.ಮಂಜು ಅಭಿನಂಧಿಸಿದ್ದು ಇದು ಕ್ಷೇತ್ರದ ನೈಜ ಜೆಡಿಎಸ್ ಪಕ್ಷದ ಗೆಲವು ಎಂದಿದ್ದಾರೆ. ಸಾರಂಗಿ ಚುನಾವಣೆ ಶಿಸ್ತು ಮತ್ತು ಅಶಿಸ್ತು, ಪಕ್ಷ ನಿಷ್ಠರು ಮತ್ತು ಅಪ್ರಮಾಣಿಕರ ನಡುವೆ ನಡೆದ ಚುನಾವಣೆ. ಕ್ಷೇತ್ರದಲ್ಲಿ ಜೆಡಿಎಸ್ ಮತದಾರರು ಎಂದಿಗೂ ಪಕ್ಷ ವಿರೋಧಿ ಬಂಡಾಯಗಾರರನ್ನು ಒಪ್ಪುವುದಿಲ್ಲ ಎನ್ನುವ ಸಂದೇಶವನ್ನು ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಮತದಾರರು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದ್ದಾರೆ. ಪಕ್ಷ ವಿರೋಧಿಗಳು ಈಗಾಗಲಾದರೂ ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಲಿ. ಸದರಿ ಚುನಾವಣೆ ಪ್ರತಿಷ್ಠೆಯಲ್ಲಿ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಪಕ್ಷದ ಪ್ರಬುದ್ದ ಮತದಾರರು ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಎನ್ನುವುದನ್ನು ಮತ್ತೊಮ್ಮೆ ಧೃಡೀಕರಿಸಿದ್ದಾರೆಂದರು.

































