
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.19: ಕೌಶಲ ಅಭಿವೃದ್ಧಿ ಇಲಾಖೆ ಮಾರ್ಗದರ್ಶ ನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ’ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಬಳ್ಳಾರಿ ಉದ್ಯಮ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಅವರು ಮನವಿ ಸಲ್ಲಿಸಿದ್ದಾರೆ.
“ವಿಶ್ವಸಂಸ್ಥೆಯು 2014ರ ಡಿ.18ರಂದು ನಡೆದ ಸಾಮಾನ್ಯ ಸಭೆಯಲ್ಲಿ ಶ್ರೀಲಂಕಾ ದೇಶದ ಸಲಹೆ ಮೇರೆಗೆ ಪ್ರತಿವರ್ಷ 15ನೇ ಜುಲೈ ಅನ್ನು ‘ವಿಶ್ವಯುವ ಕೌಶಲ ದಿನ’ವನ್ನಾಗಿ ಆಚರಿಸಲು ನಿರ್ಣಯಿಸಿ ಘೋಷಿಸಿದೆ. ಉದ್ಯೋಗ ಕೊರತೆ ನೀಗಿಸಲು ಮತ್ತು ಯುವ ಜನತೆಯನ್ನು ಉದ್ಯಮಶೀಲರನ್ನಾಗಿ ಮಾಡಲು ಬೆಂಬಲಿಸುವುದು ವಿಶ್ವ ಕೌಶಲ ದಿನಾಚರಣೆ ಪ್ರಮುಖ ಗುರಿಯಾಗಿದೆ.
ರಾಜ್ಯದ ಬೆಂಗಳೂರು ನಗರ, ಗ್ರಾಮೀಣ, ಮೈಸೂರು, ಹಾಸನ, ಬಳ್ಳಾರಿ, ಬಾಗಲಕೋಟೆ, ಹಾವೇರಿ ಹಾಗೂ ಗದಗ ಜಿಲ್ಲೆಗಳನ್ನು ಆಕಾಂಕ್ಷಿ ಜಿಲ್ಲೆಗಳೆಂದು ಕೇಂದ್ರ ಸರಕಾರ ಗುರುತಿಸಿದ್ದು, ಈ ಜಿಲ್ಲೆಗಳಲ್ಲಿ ಕೌಶಲಾಭಿವೃದ್ಧಿಗೆ ಇಲಾಖೆಯಿಂದ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ರಾಜ್ಯ ಸರಕಾರ ಹೆಚ್ಚಿನ ಉತ್ತೇಜನ ಅವಶ್ಯಕತೆ ಇದೆ.
ವಿಶೇಷವಾಗಿ ಬಳ್ಳಾರಿ ಜಿಲ್ಲೆಯಿಂದ ವ್ಯವಸಾಯ ಉತ್ಪನ್ನಗಳ ಹಾಗೂ ಸಿದ್ದ ಉಡುಪುಗಳ ರಫ್ತು ವ್ಯಾಪಾರಕ್ಕೆ ಇರುವ ವಿಪುಲ ಅವಕಾಶ ಸದುಪಯೋಗಪಡಿ ಸಿಕೊಳ್ಳಲು ಯುವ ಉದ್ದಿಮೆದಾರರನ್ನು ಬೆಂಬಲಿಸಲು ವಿಶೇಷ ತರಬೇತಿ ನೀಡಬೇಕಾಗಿದೆ ಎಂದು ಮನವಿ ಉಲ್ಲೇಖಿಸಿದ್ದಾರೆ.































