Home ಜಿಲ್ಲೆ ಮಂಗಳೂರು ಕರಾವಳಿಯಲ್ಲಿ ಕನ್ಯಾಮರಿಯಮ್ಮನವರ ಜನ್ಮದಿನದ ಸಂಭ್ರಮಾಚರಣೆ

ಕರಾವಳಿಯಲ್ಲಿ ಕನ್ಯಾಮರಿಯಮ್ಮನವರ ಜನ್ಮದಿನದ ಸಂಭ್ರಮಾಚರಣೆ

ಮಂಗಳೂರು-ಕರಾವಳಿಯಲ್ಲಿ ಕನ್ಯಾಮರಿಯಮ್ಮನವರ ಜನ್ಮದಿನದ ಸಂಭ್ರಮಾಚರಣೆಯ ಹಬ್ಬ ’ಮೊಂತಿ ಫೆಸ್ಟ್’ನ್ನು ಕ್ರೆಸ್ತರು ಇಂದು (ಮಂಗಳವಾರ) ಸಂಭ್ರಮದಿಂದ ಆಚರಿಸುತ್ತಿದ್ದಾರೆ.


ತೆನೆ ಹಬ್ಬವೆಂದೂ ಕರೆಯಲ್ಪಡುವ ಮೊಂತಿ ಫೆಸ್ಟ್ ಪ್ರಯುಕ್ತ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ, ಹೊಸ ತೆನೆಯ ಆಶೀರ್ವಚನ, ವಿತರಣೆ, ಮೆರವಣಿಗೆ, ಪುಷ್ಪಾರ್ಚನೆಯ ಮೂಲಕ ಮೇರಿ ಮಾತೆಗೆ ನಮನ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಹಬ್ಬದ ಭೋಜನವನ್ನು ಮಾಡಲಾಗುತ್ತದೆ.
ಮಂಗಳೂರಿನ ರೊಸಾರಿಯೊ ಚರ್ಚ್, ಬೋಂದೆಲ್ ಚರ್ಚ್, ಉರ್ವಾ ಚರ್ಚ್ ಸೇರಿದಂತೆ ವಿವಿಧ ಚರ್ಚ್ ಗಳಲ್ಲಿ ಬೆಳಗ್ಗೆ ವಿಶೇಷ ಬಲಿಪೂಜೆ ನೆರವೇರಿತು. ತೆನೆಗಳನ್ನು ಆಶೀರ್ವಚನ ನಡೆಸಿ ಮೆರವಣಿಗೆಯಲ್ಲಿ ಕೊಂಡೊಯ್ದರು.
ಸ್ಥಳೀಯವಾಗಿ ಬೆಳೆಯುವ ತರಕಾರಿಯ ಪಲ್ಯ, ಸಾರು, ಸಿಹಿ ಪಾಯಸದಿಂದ ಕೂಡಿದ ಸಸ್ಯಾಹಾರಿ ಭೋಜನ ಕರಾವಳಿ ಕ್ರೈಸ್ತರ ಮನೆಗಳಲ್ಲಿ ಮೊಂತಿ ಹಬ್ಬದ ವಿಶೇಷವಾಗಿರುತ್ತದೆ.
ವಿಟ್ಲ ಶೋಕಮಾತೆಯ ಇಗರ್ಜಿಯಲ್ಲಿ ತೆನೆ ಹಬ್ಬ
ವಿಟ್ಲ ಶೋಕಮಾತೆಯ ಇಗರ್ಜಿಯಲ್ಲಿ ತೆನೆ ಹಬ್ಬ ಆಚರಿಸಲಾಯಿತು. ವಿಟ್ಲ ಶತಮಾನೋತ್ಸವ ಸಮುದಾಯ ಭವನದಿಂದ ಹೊಸ ತೆನೆಗಳನ್ನು ಮೆರವಣಿಗೆಯಲ್ಲಿ ಚರ್ಚ್ ಗೆ ತರಲಾಯಿತು. ಫಾ. ಮೈಕಾಲ್ ಲೋಬೋ, ಫಾ ಅಮಿತ್ ಪ್ರಕಾಶ್ ರೋಡ್ರಿಗಸ್ ವಿಶೇಷ ಪೂಜೆ ನೆರವೇರಿಸಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಲೇರಿಯನ್ ವೇಗಸ್, ಕಾರ್ಯದರ್ಶಿ ಶಾಲೆಟ್ ಪಾಯಿಸ್, ೨೨ ಆಯೋಗದ ಸಂಚಾಲಕಿ ಜೆಸಿಂತಾ ಫರ್ನಾಂಡೀಸ್ ವಿಟ್ಲ ಚರ್ಚ್ ಅಧೀನಕ್ಕೊಳಪಟ್ಟ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.