
ವಾಷಿಂಗ್ಟನ್.ಜು19: ತೀವ್ರ ಎಡಪಂಥೀಯ ಉಗ್ರಗಾಮಿತ್ವ ಹಾಗೂ ರಾಜಕೀಯ ಭಯೋತ್ಪಾದನೆ ವಿರುದ್ಧ ಅಮೆರಿಕ ಆಯೋಜಿಸಿದ್ದ ಮಹತ್ವದ ಸಚಿವರ ಮಟ್ಟದ ಸಭೆಯಲ್ಲಿ ಭಾರತ ಸೇರಿದಂತೆ ಜಗತ್ತಿನ ಒಟ್ಟು 67 ದೇಶಗಳು ಭಾಗವಹಿಸಿದ್ದವು. ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಯಭಾರಿ ವಿನಯ್ ಕ್ವಾತ್ರಾ ಅವರು, ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಅಜೆಂಡಾಗಳನ್ನು ಹೊಂದಿರುವ ಉಗ್ರ ಸಂಘಟನೆಗಳ ವಿರುದ್ಧ ಜಾಗತಿಕ ಸಮುದಾಯ ‘ಶೂನ್ಯ ಸಹಿಷ್ಣುತೆ’ (ಜೀರೋ ಟಾಲರೆನ್ಸ್) ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಎಡಪಂಥೀಯ ಭಯೋತ್ಪಾದನೆಯನ್ನು ಮಟ್ಟಹಾಕಲು ಎಲ್ಲಾ ದೇಶಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಲಾಯಿತು. ಇದೇ ವೇಳೆ ಜಿಹಾದಿ ಭಯೋತ್ಪಾದನೆಯ ಭೀತಿ ಜಾಗತಿಕವಾಗಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ರೂಬಿಯೋ ಪ್ರತಿಪಾದಿಸಿದರು.
ಆದರೆ, ಈ ವಾದವನ್ನು ಸಂಪೂರ್ಣವಾಗಿ ಒಪ್ಪದ ಭಾರತವು ತನಗೆ ಎದುರಾಗಿರುವ ವಾಸ್ತವ ಪರಿಸ್ಥಿತಿಯನ್ನು ಸಭೆಯ ಗಮನಕ್ಕೆ ತಂದಿತು. ಎಡಪಂಥೀಯ ಉಗ್ರಗಾಮಿತ್ವವನ್ನು ಎದುರಿಸುವಲ್ಲಿ ಭಾರತಕ್ಕಿರುವ ದಶಕಗಳ ಸುದೀರ್ಘ ಅನುಭವವನ್ನು ಹಂಚಿಕೊಂಡ ವಿನಯ್ ಕ್ವಾತ್ರಾ, ಭಾರತಕ್ಕೆ ಜಿಹಾದಿ ಹಾಗೂ ಗಡಿಯಾಚೆಗಿನ ಭಯೋತ್ಪಾದನೆಯ ಭೀತಿ ಇಂದಿಗೂ ಅಷ್ಟೇ ತೀವ್ರವಾಗಿದೆ ಎಂದು ಸ್ಪಷ್ಟಪಡಿಸಿದರು. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಒಂದೇ ದೃಷ್ಟಿಕೋನದಿಂದ ನೋಡಿ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸುಮಾರು 70 ದೇಶಗಳ ವಿದೇಶಾಂಗ ಸಚಿವರಿಗೆ ಅಮೆರಿಕ ಆಹ್ವಾನ ನೀಡಿತ್ತಾದರೂ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪ್ರವಾಸದಲ್ಲಿದ್ದ ಕಾರಣ ಅವರ ಪರವಾಗಿ ರಾಯಭಾರಿ ಕ್ವಾತ್ರಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಲವು ದೇಶಗಳು ತೀವ್ರ ಎಡಪಂಥೀಯ ಉಗ್ರವಾದದ ಕುರಿತಾದ ಅಮೆರಿಕದ ಅತಿಯಾದ ಮುತುವರ್ಜಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ, ಕಿರಿಯ ರಾಜತಾಂತ್ರಿಕರನ್ನು ಸಭೆಗೆ ಕಳುಹಿಸಿದ್ದವು. ಆದಾಗ್ಯೂ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜಾಗತಿಕವಾಗಿ ಉಗ್ರ ಜಾಲಗಳನ್ನು ಧ್ವಂಸಗೊಳಿಸಲು ಜಂಟಿ ಕಾರ್ಯಾಚರಣೆ ಅನಿವಾರ್ಯ ಎಂದು ಅಮೆರಿಕ ಪ್ರತಿಪಾದಿಸಿದೆ.
































