Home ಜಿಲ್ಲೆ ಅಯೋದ್ಯೆ ಹುಂಡಿ ಹಣ ಕಳ್ಳತನ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ನಿಂದ ಪಂಜಿನ ಮೆರವಣಿಗೆ

ಅಯೋದ್ಯೆ ಹುಂಡಿ ಹಣ ಕಳ್ಳತನ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ನಿಂದ ಪಂಜಿನ ಮೆರವಣಿಗೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜು.19: ಅಯೋಧ್ಯೆ ರಾಮ ಮಂದಿರದ ಹುಂಡಿ ಹಣದ ಕಳ್ಳತನ ಮತ್ತು ದುರುಪಯೋಗವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ. ನಿನ್ನೆ ಸಂಜೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯಿಂದ ಗಡಗಿ ಚೆನ್ನಪ್ಪ ಸರ್ಕಲ್ ವರೆಗೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಬಳ್ಳಾರಿ ಗ್ರಾಮಾಂತರ ಮತ್ತು ನಗರ ಜಿಲ್ಲಾ ಕಾಂಗ್ರೆಸ್ ಇದನ್ನು ಆಯೋಜಿಸಿತ್ತು.

ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಪಕ್ಷದ ಪ್ರಚಾರ ಸಮಿತಿಯ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ನಗರ ಜಿಲ್ಲಾ ಅಧ್ಯಕ್ಷ ಈರನಗೌಡ ಮೊದಲಾದವರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಮುಖಂಡರು. ರಾಮನ ಹೆಸರೇಳಿಕೊಂಡ ಜಪಿಸುವವರೇ ರಾಮನ ಹುಂಡಿಯ ಹಣ ಕದ್ದಿದ್ದಾರೆ ಎಂದರೆ ಇವರ ಭಕ್ತಿ ಎಂತಹದು. ದೇಶದ ಜನತೆ ರಾಮನಿಗಾಗಿ ಸಲ್ಲಿಸಿದ ಕಾಣಿಕೆಯನ್ನು ಕದ್ದಿರುವ ಇವರಿಗೆ ಏನೆನ್ನಬೇಕು.

ಕದ್ದಿರುವ ಕೆಲವರನ್ನು ಮಾತ್ರ ಈಗ ಎಸ್ ಐಟಿ ಮೂಲಕ ಬಂಧಿಸಲಾಗಿದೆ.  ಇದರ ಹಿಂದೆ ಇನ್ನೂ ಹಲವರ ಕೈವಾಡ ಇರುವ ಶಂಕೆ ಇದೆ.

ಸರಿಯಾದ ತನಿಖೆ ಮಾಡಬೇಕು ಅದಕ್ಕಾಗಿ ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.