Home ಜಿಲ್ಲೆ ಮಂಗಳೂರು ಸ್ನೇಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಸ್ನೇಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಸುಳ್ಯ:ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ವಿಜ್ಞಾನ ಶಿಕ್ಷಕಿ ಮಾಲತಿ ಪರಿಸರದ ಮಹತ್ವವನ್ನು ಉದ್ದೇಶಿಸಿ ಮಾತನಾಡಿ “ಪರಿಸರ ಇಲ್ಲದೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ. ನಾವು ಪ್ರಕೃತಿಯನ್ನು ಕಾಪಾಡಬೇಕು ಆಗ ಪ್ರಕೃತಿ ನಮ್ಮ ಭವಿಷ್ಯವನ್ನು ಕಾಪಾಡುತ್ತದೆ. ಎಲ್ಲಾ ಜೀವ ಜಂತುಗಳು ಪ್ರಕೃತಿಯನ್ನೇ ಅವಲಂಬಿಸಿವೆ. ಆದರೆ ಅತಿ ಬುದ್ಧಿಜೀವಿ ಎನಿಸಿದ ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುವುದರಿಂದ ಹವಾಮಾನ ವೈಪರಿತ್ಯಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ದೇವಿಪ್ರಸಾದ ಜಿ ಸಿ ಮಾತನಾಡಿ “ಜೀವ ಜಂತುಗಳ ನಾಶಕ್ಕೆ ಮಾನವನೇ ಕಾರಣ. ಇಂದು ಪರಿಸರಕ್ಕೆ ಮಾನವ ಅಪಾಯವನ್ನು ತಂದೊಡ್ಡಿದ್ದಾನೆ. ಆ ಮೂಲಕ ನೀರು, ಗಾಳಿ ಮೊದಲಾದ ಪ್ರಾಕೃತಿಕ ಕೊಡುಗೆಗಳನ್ನು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಬಂದೊದಗಿದೆ. ಮಾನವನಿಗೆ ಅವನ ಅಂಗಾಂಗಗಳು ಎಷ್ಟು ಮುಖ್ಯವೋ ಹಾಗೆ ಜೀವ ಜಂತುಗಳ ಬದುಕಿಗೆ ಪರಿಸರ ವ್ಯವಸ್ಥೆಯ ಪ್ರತಿಯೊಂದು ಘಟಕಗಳೂ ಅಷ್ಟೇ ಮುಖ್ಯವೆನಿಸಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು” ಎಂದು ಹೇಳಿದರು.
ಶಿಕ್ಷಕಿ ಶ್ರೀದೇವಿ ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.