
ಸ್ಕ್ರಿಬಲ್ ಆರ್ಟ್ಸ್ ತಂತ್ರದ ಚಾರ್ಲಿಚಾಪ್ಲಿನ್ ಕಲಾಕೃತಿ-
ಪುತ್ತೂರು: ಚಾರ್ಟ್ ಪೇಪರ್ ಮೇಲೆ ಕಪ್ಪು ಮಾರ್ಕರ್ ಪೆನ್ ಬಳಸಿ, ಸ್ಕ್ರಿಬಲ್ ಆರ್ಟ್ ತಂತ್ರದ ಮೂಲಕ ಖ್ಯಾತ ನಟ ಹಾಗೂ ನಿರ್ದೇಶಕ ಚಾರ್ಲಿ ಚಾಪ್ಲಿನ್ ಅವರ ಕಪ್ಪು-ಬಿಳುಪು ಸ್ಕೆಚ್ ಕಲಾಕೃತಿಯನ್ನು ರಚಿಸಿದ ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸಿಂಧೂರಾ ಶೆಟ್ಟಿ ಅವರು ಇಂಡಿಯಾ ಬುಕ್ ಆಫ್ ರೆಕಾಡ್ಸ್ ನ ‘ಐಬಿಆರ್ ಅಚೀವರ್ ಬಿರುದಿಗೆ ಪಾತ್ರರಾಗಿದ್ದಾರೆ.
೧೮ ವರ್ಷ ಒಂದು ತಿಂಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಸಿಂಧೂರಾ ಶೆಟ್ಟಿ ಅವರ ದಾಖಲೆಯನ್ನು ೨೦೨೬ರ ಜುಲೈ ೯ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕೃತವಾಗಿ ದೃಢೀಕರಿಸಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕೆಲಾಜೆ ಸಾಯಿ ಪ್ರಸಾದ ಮನೆ ನಿವಾಸಿ ಕೃಷ್ಣ ಶೆಟ್ಟಿ ಮತ್ತು ಭಾರತಿ ಶೆಟ್ಟಿ ದಂಪತಿಯ ಪುತ್ರಿಯಾದ ಸಿಂಧೂರಾ ಶೆಟ್ಟಿ, ನಡ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಹಾಗೂ ಉಜಿರೆಯ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.

ಸಿಂಧೂರಾ ಅವರ ಕಲಾ ಪ್ರತಿಭೆಗೆ ಇದು ಮೊದಲ ಗುರುತಿಸಿಕೊಳ್ಳುವಿಕೆಯಲ್ಲ. ಈ ಹಿಂದೆ ಅವರು ೪೬ ಎ೪ ಶೀಟ್ಗಳನ್ನು ಬಳಸಿ, ಕವಯತ್ರಿ ಸರೋಜಿನಿ ನಾಯ್ಡು ಅವರ ಕವನಗಳನ್ನು ಆಧರಿಸಿದ ಟೈಪೋಗ್ರಾಫಿಕ್ ಆರ್ಟ್ ರಚಿಸಿ ಗಮನ ಸೆಳೆದಿದ್ದರು. ವಿಭಿನ್ನ ಕಲಾ ಮಾಧ್ಯಮ ಹಾಗೂ ತಂತ್ರಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸುವ ಮೂಲಕ ಅವರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದೀಗ ಚಾರ್ಲಿ ಚಾಪ್ಲಿನ್ ಅವರ ಸ್ಕೆಚ್ ಕಲಾಕೃತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ದೊರೆತಿರುವುದು ಅವರ ಕಲಾ ಪಯಣದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ಶಿಕ್ಷಣದ ಜತೆಗೆ ಕಲಾ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು ಮುಂದುವರಿಸುತ್ತಿರುವ ಸಿಂಧೂರಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಕನಸು ಹೊಂದಿದ್ದು, ತಮ್ಮ ಸೃಜನಶೀಲತೆಯ ಮೂಲಕ ಮತ್ತಷ್ಟು ಗಮನಾರ್ಹ ಸಾಧನೆಗಳನ್ನು ದಾಖಲಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಈ ಕಲಾಪ್ರತಿಭೆಯ ವಿದ್ಯಾರ್ಥಿನಿ ಸಿಂಧೂರಾ ಶೆಟ್ಟಿ ಅವರನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಆಂಟನಿ ಪ್ರಕಾಶ್ ಮೊಂತೆರೂ ಹಾಗೂ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಬೋಧಕೇತರ ಸಿಬಂದಿಗಳು ಅಭಿನಂದಿದ್ದಾರೆ.


































