Home ಜಿಲ್ಲೆ ಮಂಗಳೂರು ಶ್ರದ್ಧಾಕೇಂದ್ರಗಳು ‘ವಿವೇಕ’ ಜಾಗೃತಿಯ ತಾಣಗಳು- ಗೆಹ್ಲೋಟ್

ಶ್ರದ್ಧಾಕೇಂದ್ರಗಳು ‘ವಿವೇಕ’ ಜಾಗೃತಿಯ ತಾಣಗಳು- ಗೆಹ್ಲೋಟ್

ಪುತ್ತೂರು: ದೇವಳದ ಬ್ರಹ್ಮಕಲಶ ಎನ್ನುವುದು ಹೊಸತನದ ಉದ್ದೀಪನೆ. ಶ್ರದ್ಧಾಕೇಂದ್ರಗಳು ಸಾಮಾಜಿಕ ಶಾಂತಿ ಪ್ರೇರಣೆಯ ತಾಣಗಳು. ಶ್ರದ್ಧೆ ಮತ್ತು ಭಕ್ತಿಯ ಮೂಲಕ ಆಧ್ಯಾತ್ಮಿಕ ಪರಂಪರೆಯ ಈ ತಾಣಗಳು ಜನತೆಯಲ್ಲಿ ವಿವೇಕವನ್ನು ಜಾಗೃತಿಗೊಳಿಸಬೇಕು. ಸೇವೆ ಹಾಗೂ ಸಮರ್ಪಣಾ ಮನೋಭಾವ ಮನುಷ್ಯ ಜೀವನದ ವಿಧಾನವಾಗಬೇಕು ಎಂದು ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.
ಶುಕ್ರವಾರ ಹನುಮಗಿರಿ ಕೋದಂಡರಾಮ, ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಕ್ಷೇತ್ರದ ಮುಖಗೋಪುರವನ್ನು ಉದ್ಘಾಟಿಸಿ ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಕೇಂದ್ರಗಳಾಗಿರುವ ದೇವಮಂದಿರಗಳು ಸತ್ಯ ಧರ್ಮ ಸೇವೆಗಳಿಗೆ ಪ್ರತಿರೂಪವಾಗಿವೆ. ವಿಶ್ವಕಲ್ಯಾಣ ಮತ್ತು ಶಾಂತಿ ನಮ್ಮ ಸಂಸ್ಕೃತಿಯಾಗಿದೆ. ನಮ್ಮಲ್ಲಿರುವ ಆಧ್ಯಾತ್ಮಿಕತೆ ಅದಕ್ಕೆ ಶಕ್ತಿ ಎರೆಯುತ್ತದೆ. ಅತ್ಯಂತ ಕಠಿಣ ಸಂದರ್ಭದಲ್ಲಿಯೂ ಹನುಮ ತಾನು ನಂಬಿದ ಸತ್ಯ ಮತ್ತು ವಿಧೇಯತೆಯ ಹಾದಿಯನ್ನು ಬಿಟ್ಟು ಹೋಗಿಲ್ಲ. ಹನುಮ ಅಖಂಡ ಭಕ್ತಿಯ ಪ್ರತೀಕವಾದರೆ, ರಾಮ ಆದರ್ಶದ ರೂಪ. ಐತಿಹಾಸಿಕ ಹಿನ್ನೆಯ ಹನುಮಗಿರಿ ಕ್ಷೇತ್ರ ಭಕ್ತರಲ್ಲಿ ಸಂಸ್ಕೃತಿ ಹಾಗೂ ದೇಶಪ್ರೇಮವನ್ನು ಪ್ರೇರೇಪಿಸುವ ತಾಣವಾಗಲಿ ಎಂದು ಅವರು ಹಾರೈಸಿದರು.
ಕೋದಂಡ ರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆದ ಮುಖಗೋಪುರ ಮತ್ತು ಬ್ರಹ್ಮಕಲಶ ಕಾರ್ಯವು ನಮ್ಮ ಪರಂಪರೆಯನ್ನು ಎತ್ತಿ ಹಿಡಿಯುವ ಜೀವಂತಿಕೆಯನ್ನು ಸಾರುವಂತಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು ಉಳಿಸುವ ಕಾರ್ಯವನ್ನು ಅನಾದಿ ಕಾಲದಿಂದಲೂ ಸಾಧು ಸಂತರು ಮಾಡಿಕೊಂಡು ಬಂದಿದ್ದಾರೆ. ನದಿ ಪರ್ವತ, ಪಶು ಪಕ್ಷಿಗಳು ಎಲ್ಲವೂ ಪೂಜನೀಯವಾಗಿರುವಂತ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ಧರ್ಮ ಸಂಸ್ಕೃತಿಯನ್ನು ಉಳಿಸುವ ಕರ್ತವ್ಯ ಮಾಡುವ ಜೊತೆಗೆ ಸರ್ವ ಲೋಕವು ಸುಖಮಯವಾಗಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅರ್ಥಪೂರ್ಣ ಬ್ರಹ್ಮಕಲಶ
ಶ್ರೀ ಸಂಸ್ಥಾನ ಗೋಕರ್ಣ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಮಾತನಾಡಿ, ದೇವ ಭಕ್ತಿ, ದೇಶ ಭಕ್ತಿ ಎರಡೂ ಹನುಮಗಿರಿ ಕ್ಷೇತ್ರದಲ್ಲಿ ಮೇಲೈಸಿದೆ. ಕಾರ್ಯ ಶಾಶ್ವತವಾದರೆ, ಕಾರ್ಯಕ್ರಮ ಅರ್ಥಪೂರ್ಣವೆನ್ನುವಂತೆ ಬ್ರಹ್ಮಕಲಶ ಉತ್ಸವವನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಇಲ್ಲಿ ಸಂಯೋಜಿಸಲಾಗಿದೆ. ಇದಕ್ಕೆ ಸಂಘದ ಪ್ರೇರಣೆ, ಸಂತರ ಆಶೀರ್ವಾದವೂ ಇದೆ ಎಂದು ಹೇಳಿದರು.
ರಾಮ, ಹನುಮ ಅದ್ವೈಕ ಜ್ಯೋತಿ ಇಲ್ಲಿಗೆ ಬಂದಿದೆ. ಉತ್ತರದಿಂದ ರಾಮ, ದಕ್ಷಿಣದಿಂದ ಹನುಮ ಕ್ಷೇತ್ರದ ಬೆಳಕು ಹನುಮಗಿರಿಯಲ್ಲಿ ಸಮಾಗಮವಾಗಿದೆ. ಕ್ಷೇತ್ರದಲ್ಲಿ ಗೋಶಾಲೆ, ವನ, ಶಿಲ್ಪರಾಮಾಯಣ, ಭಾರತ್ ಮಾತಾ ಮಂದಿರ ಮೊದಲಾದವು ಉತ್ತಮ ಸಂದೇಶ ನೀಡುತ್ತಿದೆ. ಭಾರತ ವಿಶ್ವಗುರುವಾಗುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಅದಕ್ಕೆ ಸಾಕ್ಷಿಯಾಗುತ್ತಿರುವುದು ಅತ್ಯಂತ ಪುಣ್ಯದಾಯಕ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಹನುಮಗಿರಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಭಾರತ ಮಾತೆಯ ಮಂದಿರವಿರುವ ಏಕೈಕ ಕ್ಷೇತ್ರ ಹನುಮಗಿರಿ. ಇಲ್ಲಿ ರಾಷ್ಟ್ರ, ಧರ್ಮ ಜಾಗೃತಿ ಇದೆ. ಅಯೋಧ್ಯೆಯಿಂದ ಜ್ಯೋತಿ, ರಾಮ ಜಪದೀಕ್ಷೆ ಮೊದಲಾದ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ಕ್ಷೇತ್ರದ ಬ್ರಹ್ಮಕಲಶೋತ್ಸವ ವಿಶ್ವ ಕಲ್ಯಾಣದ ಸಂಕಲ್ಪದೊಂದಿಗೆ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಅಶೋಕ್ ಕುಮಾರ್ ರೈ ರಾಜ್ಯಪಾಲರನ್ನು ಗೌರವಿಸಿದರು. ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರ್ವಹಿಸಿದರು.