Home ಜಿಲ್ಲೆ ಮೈಸೂರು ಶಾಸಕರು ಲಘುವಾಗಿ ಮಾತನಾಡಬಾರದು: ಸಿ.ಡಿ.ಗಂಗಾಧರ್

ಶಾಸಕರು ಲಘುವಾಗಿ ಮಾತನಾಡಬಾರದು: ಸಿ.ಡಿ.ಗಂಗಾಧರ್

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.03:
ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ನಡೆದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು ಅವರು ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಶೀಳನೆರೆ ಅಂಬರೀಶ್ ಅವರನ್ನು ನಿಂದಿಸಿದ್ದು ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.


ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಡಿ.ಗಂಗಾಧರ್ ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರ ಪ್ರಬುದ್ದ ರಾಜಕಾರಣಿಗಳಿಗೆ ಹೆಸರಾಗಿದೆ. ಶಾಸಕರು ಇತರ ರಾಜಕಾರಣಿಗಳ ಬಗ್ಗೆ ಲಘುವಾಗಿ ಮಾತನಾಡಬಾರದು. ಶಾಸಕ ಸ್ಥಾನದ ಘನತೆ ಗೌರವಗಳಿಗೆ ಚ್ಯುತಿ ಬರದಂತೆ ಶಾಸಕರ ನಡವಳಿಕೆಗಳಿರಬೇಕು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಪಕ್ಷ ರಾಜಕಾರಣ. ಅನಂತರ ಶಾಸಕರಾದವರು ಕ್ಷೇತ್ರದ ಸರ್ವ ಜನರಿಗೂ ಶಾಸಕರು ಎಂದ ಸಿ.ಡಿ.ಗಂಗಾಧರ್ ಶಾಸಕ ಹೆಚ್.ಟಿ.ಮಂಜು ತಾಳ್ಮೆಯ ರಾಜಕಾರಣ ಮಾಡಬೇಕು. ರಾಜಕೀಯ ಮುಖಂಡರ ಬಗ್ಗೆ ವೈಯಕ್ತಿಕ ಟೀಕೆ ಸಲ್ಲದು. ಕಾಂಗ್ರೆಸ್ ಪಕ್ಷ ಅಂಬರೀಶ್ ಅವರ ಜೊತೆಗಿದೆ. ಶಾಸಕರ ನಡೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆಂದರು.


ತಾಲೂಕು ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ ಶಾಸಕ ಹೆಚ್.ಟಿ.ಮಂಜು ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ಬದಲು ಕ್ಷೇತ್ರದಲ್ಲಿ ತಮ್ಮ ಶಾಸಕತ್ವದ ಜವಾಬ್ದಾರಿ ಅರಿತು ಮಾತನಾಡಲಿ. ಕ್ಷೇತ್ರದಲ್ಲಿ ನೂರೆಂಟು ಸಮಸ್ಯೆಗಳಿವೆ. ಕಳೆದ 09 ತಿಂಗಳಿನಿಂದ ಒಂದೇ ಒಂದು ಅಕ್ರಮ-ಸಕ್ರಮ ಸಮಿತಿ ಸಭೆ ನಡೆಸಿ ಭೂ ರಹಿತರಿಗೆ ಭೂ ಮಂಜೂರಾತಿ ಕೆಲಸ ಮಾಡಿಲ್ಲ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂರೆಂಟು ಸಮಸ್ಯೆಗಳಿವೆ. ಇದುವರೆಗೂ ಶಾಸಕರು ತಮ್ಮ ಅಧ್ಯಕ್ಷತೆಯಲ್ಲಿ ಆರೋಗ್ಯ ಸುರಕ್ಷಾ ಸಮಿತಿ ಸಭೆ ಮಾಡಿಲ್ಲ. ಕಳೆದ 09 ತಿಂಗಳಿನಿಂದ ಒಂದೇ ಒಂದು ಕೆ.ಡಿ.ಪಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಿಲ್ಲ. ಕ್ಷೇತ್ರದಾದ್ಯಂತ ವ್ಯಾಪಕ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಪಟ್ಟಣದಾದ್ಯಂತ ಫುಟ್ ಪಾಥ್ ಅತಿಕ್ರಮಣವಾಗಿದ್ದು ಇದಕ್ಕೆ ಶಾಸಕರೇ ಕುಮ್ಮಕ್ಕು ನೀಡುತ್ತಿದ್ದಾರೆ. ವಿದ್ಯುತ್ ಇಲಾಖೆ ರೈತರಿಗೆ ಸರ್ಮಪಕ ಟಿ.ಸಿ ನೀಡುತ್ತಿಲ್ಲ. ತಾಲೂಕು ವ್ಯಾಪ್ತಿಯ ನದಿ ಅಣೆಕಟ್ಟೆ ನಾಲೆಗಳಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ನೀರು ಹರಿಸದೆ ರೈತರ ಬೆಳೆಗಳು ಒಣಗುತ್ತಿವೆ. ಇದರ ಬಗ್ಗೆ ಶಾಸಕರು ಮಾತನಾಡುತ್ತಿಲ್ಲ. ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಭ್ರಷ್ಟರ ಬೀಡಾಗಿದ್ದು ಇಲಾಖಾವಾರು ಸಭೆ ನಡೆಸಿ ಅಧಿಕಾರಿಗಳನ್ನು ನಿಯಂತ್ರಿಸುವ ಕೆಲಸವನ್ನು ಶಾಸಕರು ಮಾಡುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದು ನನಗೆ ಅನುದಾನ ನೀಡುತ್ತಿಲ್ಲ ಎಂದು ಶಾಸಕರು ಜನರ ಮುಂದೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಸರ್ಕಾರದ ಅನುದಾನವಿಲ್ಲದಿದ್ದಮೇಲೆ ಶಾಸಕರು ನಿತ್ಯ ಅಭಿವೃದ್ದಿ ಕಾಮಗಾರಿಗಳಿಗೆ ಮಾಡುತ್ತಿರುವ ಗುದ್ದಲಿ ಪೂಜೆ ಅನುದಾನ ಯಾವುದು ಎನ್ನುವುದನ್ನು ಬಹಿರಂಗಪಡಿಸಬೇಕೆಂದರು.


ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ರೈತರ ಕೃಷಿ ಭೂಮಿಗೆ ಮತ್ತು ತಾಲೂಕಿನ ಕೆರೆ-ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸುವ ವಿಚಾರದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರು ಮೌನವಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿ.ಡಿ.ಗಂಗಾಧರ್ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕರುಳಿ ರಮೇಶ್, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎ.ಬಿ.ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ಮುಖಂಡರಾದ ರಾಜಯ್ಯ, ಹರಿಹರಪುರ ಶ್ರೀಧರ್, ಜಗದೀಶ್, ಇಲಿಯಾಸ್ ಪಾಷ, ಮತ್ತಿತರರಿದ್ದರು.