
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.14: ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವ ಮತ್ತು ಅಂಕಗಳನ್ನು ಹೆಚ್ಚಿಸುವ ಭ್ರಷ್ಟ ದಂಧೆ ವ್ಯಾಪಕವಾಗಿ ನಡೆಯುತ್ತಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನೀಯವಾಗಿದೆ ಎಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಅವರು, “ವಿಶ್ವವಿದ್ಯಾಲಯದ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ಮೌಲ್ಯಮಾಪಕರ ದೊಡ್ಡ ಜಾಲವೇ ಈ ಕಪ್ಪು ದಂಧೆಯ ಹಿಂದೆ ಸಕ್ರಿಯವಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ (ಫೇಲ್ ಆದ) ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಸಾವಿರಾರು ರೂಪಾಯಿ ಲಂಚ ಪಡೆದು ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಬಹಿರಂಗವಾಗಿಯೇ ಅಕ್ರಮ ಎಸಗಲಾಗುತ್ತಿದೆ. ಇದು ವಿಶ್ವವಿದ್ಯಾಲಯದ ಪಾವಿತ್ರ್ಯತೆಯನ್ನು ಗಾಳಿಗೆ ತೂರಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಘೋರ ಅಪರಾಧವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
“ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು, ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಇಂತಹ ಭ್ರಷ್ಟಾಚಾರದಿಂದಾಗಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯವಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯು ಈ ಗಂಭೀರ ದಂಧೆಯ ಕುರಿತು ತಕ್ಷಣವೇ ಗಮನಹರಿಸಬೇಕು. ವಿಶ್ವವಿದ್ಯಾಲಯದಲ್ಲಿ ಬೇರೂರಿರುವ ಈ ಭ್ರಷ್ಟ ಜಾಲವನ್ನು ಸದೆಬಡಿಯಲು ತಕ್ಷಣವೇ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು,” ಎಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಈ ಮೂಲಕ ಅತ್ಯುಗ್ರವಾಗಿ ಆಗ್ರಹಿಸುತ್ತದೆ ಎಂದು ಕಂಬಳಿ ಮಂಜುನಾಥ್ ತಿಳಿಸಿದ್ದಾರೆ.


























