
ಸಂಜೆವಾಣಿ ವಾರ್ತೆ
ಹನೂರು.ಜು.13:- ತಾಲೂಕಿನ ದೊಡ್ಡಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಿ ಹೋಗಿದ್ದು, ಜನರು ಒಂದು ಕೊಡ ನೀರಿಗಾಗಿ ಮೈಲುಗಟ್ಟಲೆ ದೂರ ನಡೆಯುವ ಅನಿವಾರ್ಯತೆ ಎದುರಾಗಿದೆ. ಬೇರೆಯವರ ಜಮೀನಿಗೆ ಹೋಗಿ ನೀರು ತರುವುದು ಪ್ರತಿನಿತ್ಯದ ಕಾಯಕವಾಗಿದೆ, ಕೂಲಿ ಕೆಲಸ ಬಿಟ್ಟು ನೀರಿನ ಟ್ಯಾಂಕರ್ ಬರುವುದನ್ನ ಕಾಯಬೇಕಾಗಿದೆ.
ಗ್ರಾಮ ಪಂಚಾಯಿತಿಯಿಂದ ಮೂರು ದಿನಗಳಿಗೊಮ್ಮೆ ಕಳುಹಿಸುತ್ತಿರುವ ಟ್ಯಾಂಕರ್ ನೀರು ಗ್ರಾಮದ ಜನಸಂಖ್ಯೆಗೆ ತೀರಾ ಸಾಕಾಗುತ್ತಿಲ್ಲ. ಈ ಅಸಮರ್ಪಕ ಪೂರೈಕೆಯಿಂದಾಗಿ ಜನಸಾಮಾನ್ಯರು, ಜಾನುವಾರುಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಶಾಶ್ವತ ಅಥವಾ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಅಧಿಕಾರಿಗಳ ಈ ಉದಾಸೀನತೆಯು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ತಕ್ಷಣವೇ ದೊಡ್ಡಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಪ್ರತಿದಿನ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು.
ಅಂತರ್ಜಲ ಮಟ್ಟ ಕುಸಿದಿರುವ ಕಡೆಗಳಲ್ಲಿ ತುರ್ತಾಗಿ ಬೋರ್‍ವೆಲ್‍ಗಳನ್ನು ಕೊರೆಸುವುದು ಅಥವಾ ಇರುವ ಕೊಳವೆಬಾವಿಗಳನ್ನು ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು.
ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕು.
ಒಂದು ವೇಳೆ ಕೂಡಲೇ ಈ ಕುರಿತು ಗಮನಹರಿಸಿ ಕ್ರಮ ಕೈಗೊಳ್ಳದಿದ್ದಲ್ಲಿ, ಗ್ರಾಮಸ್ಥರೆಲ್ಲರೂ ಸೇರಿ ರಸ್ತೆ ತಡೆ ಅಥವಾ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

































