
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಳಕ್ಕೆ ಸೇರಿದ ಒತ್ತೂವರಿ ಜಾಗದ ಮರುಸ್ವಾಧೀನ ಕಾರ್ಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಕೊಂಬೆಟ್ಟಿನಲ್ಲಿ ದೇವಳದ ಹೆಸರಲ್ಲಿರುವ ೧೬ ಸೆಂಟ್ಸ್ ಜಾಗವನ್ನು ಶನಿವಾರದಂದು ಗುರುತಿಸಿ ಸ್ವಾಧೀನ ಪ್ರಕ್ರಿಯೆ ನಡೆಸಲಾಯಿತು. ಪುತ್ತೂರು ಮುಖ್ಯರಸ್ತೆಯಲ್ಲಿನ ದೇವಳದ ಹೆಸರಲ್ಲಿ ಪಹಣಿ ಹೊಂದಿರುವ ಕೋಟ್ಯಾಂತರ ಮೌಲ್ಯದ ಜಾಗದ ಪರಿಶೀಲನೆ ಶಾಸಕ ಅಶೋಕ್ ರೈ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಕೊಂಬೆಟ್ಟಿನಲ್ಲಿ ಜಾಗಕ್ಕೆ ದೇವಳದ ವತಿಯಿಂದ ಫಲಕ ಹಾಕಲಾಯಿತು. ಮುಂದೆ ಈ ಭಾಗದಲ್ಲಿ ಸಂಪರ್ಕ ರಸ್ತೆ ಕಲ್ಪಿಸುವಂತೆ ಭರವಸೆ ನೀಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ಈಶ್ವರ ಬೆಡೇಕರ್, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಲೋಕೇಶ್ ಪಡ್ಡಾಯೂರು, ರೋಹನ್ರಾಜ್, ನಡುಬೈಲು ಗತ್ತು ಗೋಪಾಲ ಪೂಜಾರಿ ಮತ್ತು ದೇವಳದ ಸಿಬ್ಬಂದಿಗಳು ಸಹಿತ ಸ್ಥಳೀಯರು ಉಪಸ್ಥಿತರಿದ್ದರು.
ಒತ್ತುವರಿ ಸ್ವಾಧೀನ ನಿರಂತರ
ಮಾದ್ಯಮದ ಜತೆ ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಮಹಾಲಿಂಗೇಶ್ವರ ದೇವಸ್ಥಾನದ ಹೆಸರಿನಲ್ಲಿರುವ ಎಲ್ಲಾ ಪಹಣಿಗಳನ್ನು ಪರಿಶೀಲನೆ ವೇಳೆ ದೇವಳದ ಪಕ್ಕದಲ್ಲಿ ೧೬ ಸೆಂಟ್ಸ್ ಜಾಗ ಇರುವುದು ಗಮನಕ್ಕೆ ಬಂದಿತ್ತು. ಇದನ್ನು ಎರಡು ಮೂರು ಸಲ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ವೇ ಮಾಡಿಸಿದಾಗ ಅದು ದೇವಸ್ಥಾನದ್ದೂ ಎಂದು ಖಚಿತಪಡಿಸಿಕೊಂಡು ಅದನ್ನು ವಶಕ್ಕೆ ಪಡೆಯುವ ಕೆಲಸ ಮಾಡಿದ್ದೇವೆ. ಇಲ್ಲಿ ಜಾಗಕ್ಕೆ ಆವರಣಗೋಡೆ ಹಾಕಿ ಭದ್ರತೆ ಮಾಡಿದ್ದಾರೆ. ಯಾರ ವಶದಲ್ಲಿತ್ತು ಎಂಬ ಮಾಹಿತಿ ಇಲ್ಲ. ಆದರೆ ದೇವಸ್ಥಾನದಿಂದ ಜಾಗ ಸ್ವಾಧೀನ ಮಾಡಲಾಗಿದೆ. ಈಗಾಗಲೇ ಸುಮಾರು ೧೧ ಎಕ್ರೆಯಷ್ಟು ಜಾಗವನ್ನು ದೇವಳಕ್ಕೆ ಸ್ವಾಧೀನ ಮಾಡಲಾಗಿದೆ. ಇನ್ನೂ ಸುಮಾರು ಆರೇಳು ಎಕ್ರೆ ಜಾಗ ಇದೆ. ಈ ಕುರಿತು ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ಸಮರ್ಪಕ ದಾಖಲೆ ಅಗತ್ಯ
ಮುಖ್ಯರಸ್ತೆಯಲ್ಲಿ ಸುಮಾರು ೪೫ ಸೆಂಟ್ಸ್ ಜಾಗ ದೇವಳದ ಹೆಸರಿನಲ್ಲಿ ಆರ್ಟಿಸಿ ಇದೆ. ಈ ಜಾಗವನ್ನು ಪರಿಶೀಲನೆ ಮಾಡಿದ್ದೇವೆ. ಅಲ್ಲಿ ಯಾರು ನಮ್ಮ ಜಾಗ ಇದೆ ಎಂದು ಹೇಳಿದ್ದಾರೋ ಅವರು ಸರಿಯಾದ ದಾಖಲೆ ನೀಡಬೇಕು. ನಿರ್ದಿಷ್ಟ ಅವಧಿಯಲ್ಲಿ ದಾಖಲೆ ನೀಡಬೇಕು. ನಮ್ಮ ವಕೀಲರಲ್ಲಿ ಅದನ್ನು ತೋರಿಸುವ ಕೆಲಸ ಮಾಡುತ್ತೇವೆ. ದೇವಳದ ಆರ್ಟಿಸಿ ಇದ್ದರೆ ಅದು ದೇವಸ್ಥಾನಕ್ಕೆ ಸೇರಿದ್ದಾಗಿರುತ್ತದೆ ಎಂದು ಶಾಸಕರು ಹೇಳಿದರು.

































