
ಇದು ‘ಹೆಸರಲ್ಲ ಒಂದು ಅಧ್ಯಾಯ’
ತಲೆಮಾರುಗಳ ನಡುವಿನ ಪ್ರೀತಿ, ಕಾಳಜಿ ಹಾಗೂ ಭಾವನಾತ್ಮಕ ಸಂಬಂಧವನ್ನು ತೆರೆಮೇಲೆ ಕಟ್ಟಿಕೊಡಲು ‘ವಿಕ್ರಮ್ ವೇದಾಂತ್’ ಚಿತ್ರತಂಡ ಸಜ್ಜಾಗಿದೆ. ತಾತ–ಮೊಮ್ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಭಗವಾನ್ ಶ್ರೀ ಸುವರ್ಣ ಪಾರ್ಶ್ವನಾಥ ತೀರ್ಥಂಕರರ ದಿಗಂಬರ ಜೈನ ಬಸದಿಯಲ್ಲಿ ನೆರವೇರಿತು. ‘ಹೆಸರಲ್ಲ ಒಂದು ಅಧ್ಯಾಯ’ ಎಂಬ ಅಡಿಬರಹ ಹೊಂದಿರುವ ಚಿತ್ರಕ್ಕೆ ನವೀನ್ ಶಕ್ತಿ ನಿರ್ದೇಶನ ಮಾಡುತ್ತಿದ್ದಾರೆ.
ಮಧುರೇನಹಳ್ಳಿ ವಂಶಸ್ಥರು ಹಾಗೂ ಗುಬ್ಬಿ ನಾಟಕ ಕಂಪನಿಯ ಸ್ಥಾಪಕರಾದ ಚಂದಣ್ಣನವರ ಮೊಮ್ಮಗ ಬ್ರಹ್ಮದೇವಯ್ಯ ಅವರ ಬ್ರಹ್ಮದೇವ ಪ್ರೊಡಕ್ಷನ್ಸ್ ಮತ್ತು ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವಪ್ರದೀಪ್ ಹಾಗೂ ಆದಿನಾಥ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.
ಚಿತ್ರದ ಕುರಿತು ಮಾಹಿತಿ ನೀಡಿದ ನಿರ್ದೇಶಕ ನವೀನ್ ಶಕ್ತಿ, ‘ವಿಕ್ರಮ್ ವೇದಾಂತ್’ ತಾತ ಮತ್ತು ಮೊಮ್ಮಗನ ನಡುವಿನ ಬಾಂಧವ್ಯವನ್ನು ಭಾವನಾತ್ಮಕವಾಗಿ ತೆರೆದಿಡುವ ಕಥೆ ಹೊಂದಿದೆ. ಕುಣಿಗಲ್ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ. ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವಪ್ರದೀಪ್ ಹಾಗೂ ಸಂವಲ್ ಎಸ್. ಜೈನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂವಲ್ ಅವರಿಗೆ ಇದು ಮೂರನೇ ಚಿತ್ರ ಎಂದು ತಿಳಿಸಿದರು.
ಚಿತ್ರದಲ್ಲಿ ಎರಡು ಹಾಡುಗಳಿದ್ದು, ಲೋಕಿ ತವಸ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಸುನೀಲ್ ಹೊನ್ನಾಳಿ ಛಾಯಾಗ್ರಹಣ, ಅಕ್ಷತ ಎಸ್. ಜೈನ್ ಕಾರ್ಯಕಾರಿ ನಿರ್ಮಾಣ ಹಾಗೂ ಸುನಯ್ ಎಸ್. ಜೈನ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡಲಿದ್ದು, ಆರ್. ಮಹಾಂತೇಶ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಚಿತ್ರದ ಕಥೆಯನ್ನು ಭಾರತಿ ಎಸ್. ಬರೆದಿದ್ದಾರೆ.
ಚಿತ್ರದಲ್ಲಿ ತಾತನ ಪಾತ್ರ ನಿರ್ವಹಿಸುತ್ತಿರುವ ಶಿವಪ್ರದೀಪ್ ಮಾತನಾಡಿ, ತಾತ–ಮೊಮ್ಮಗನ ಸಂಬಂಧದ ಸುತ್ತ ಹೆಣೆದಿರುವ ಕಥೆ ಎಲ್ಲರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮೊಮ್ಮಗನ ಪಾತ್ರದಲ್ಲಿ ನಟಿಸುತ್ತಿರುವ ಸಂವಲ್ ಎಸ್. ಜೈನ್ ಕೂಡ ತಮ್ಮ ಪಾತ್ರದ ಕುರಿತು ಮಾತನಾಡಿದರು.























