Home ಜಿಲ್ಲೆ ಮೈಸೂರು ಚಿದಾನಂದಶ್ರೀ ಬಡವರು, ನಿರ್ಗತಿಕರಿಗೆ ಬೆಳಕಾದರು

ಚಿದಾನಂದಶ್ರೀ ಬಡವರು, ನಿರ್ಗತಿಕರಿಗೆ ಬೆಳಕಾದರು

ಸಂಜೆವಾಣಿ ನ್ಯೂಸ್
ಮೈಸೂರು ಆ.25:-
ನಾವು ಏನು ಮಾಡಿದ್ದೇವೆ, ಎಷ್ಟು ಮಾಡಿದ್ದೇವೆ ಎನ್ನುವುದಕ್ಕಿಂತ ಸಮಾಜಕ್ಕೆ ಏನು ಬಿಟ್ಟು ಹೋಗಿದ್ದೇವೆ ಎಂಬುದು ಬಹಳ ಮುಖ್ಯ. ಇದರಂತೆ ನಡೆದು ತೋರಿಸಿಕೊಟ್ಟವರು ಹೊಸಮಠದ ಚಿದಾನಂದ ಸ್ವಾಮೀಜಿ. ಬಡವರು, ನಿರ್ಗತಿಕರು ಹಾಗೂ ಶಿಕ್ಷಣ ವಂಚಿತ ಮಕ್ಕಳ ಬದುಕಿಗೆ ಅವರು ಬೆಳಕಾಗಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.


ನಗರದ ಹೊಸಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಚಿದಾನಂದ ಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡತನ ಯಾರಿಗೂ ಶಾಶ್ವತವಲ್ಲ ಎಂಬ ಸಂದೇಶ ನೀಡಿದ್ದ ಶ್ರೀಗಳು, ಬಡವರ ಮಕ್ಕಳು ಮುಖ್ಯವಾಹಿನಿಗೆ ಬರಬೇಕೆಂಬ ಆಶಯದಿಂದ ಶಿಕ್ಷಣ ಮತ್ತು ಸಮಾಜಸೇವೆಗೆ ಒತ್ತು ನೀಡಿದ್ದರು. ಧ್ವನಿ ಇಲ್ಲದವರ ಹಾಗೂ ಕಡುಬಡವರ ಭಾವನೆಗಳನ್ನು ಅರ್ಥೈಸಿಕೊಂಡು ನೆರವಾಗುವುದನ್ನು ತಮ್ಮ ಕೈಂಕರ್ಯವಾಗಿ ಸ್ವೀಕರಿಸಿದ್ದರು. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವರು ನೀಡಿದ ಕೊಡುಗೆ ಮರೆಯಲಾಗದು ಎಂದು ಸ್ಮರಿಸಿದರು.
ಶ್ರೀಗಳ ನೇರನುಡಿ ಕೆಲವೊಮ್ಮೆ ನಿಷ್ಠುರವಾಗಿ ಕಂಡರೂ, ಅದರ ಹಿಂದೆ ಸಮಾಜದ ಒಳಿತಿನ ಕಾಳಜಿ ಇರುತ್ತಿತ್ತು. ಸರ್ಕಾರದ ನೆರವಿಲ್ಲದೆ, ಆದಾಯದ ಮೂಲಗಳ ಅಭಾವದ ನಡುವೆಯೂ ಸಂಸ್ಥೆಗಳನ್ನು ಮುನ್ನಡೆಸಿದ ಹೊಸಮಠದ ಸೇವೆ ಶ್ಲಾಘನೀಯ ಎಂದರು.


30 ವರ್ಷಗಳ ಆತ್ಮೀಯ ಬಾಂಧವ್ಯ: ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಶ್ರೀಗಳೊಂದಿಗೆ 30 ವರ್ಷಗಳ ಆತ್ಮೀಯ ಬಾಂಧವ್ಯವಿತ್ತು. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಅನ್ನದಾಸೋಹ ಹಾಗೂ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳ ಸೇವೆಯ ಮೂಲಕ ಸಾವಿರಾರು ಜನರಿಗೆ ಅವರು ಆಶ್ರಯದಾತರಾಗಿದ್ದರು ಎಂದು ಸ್ಮರಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಮಾತನಾಡಿ, ಚಿದಾನಂದ ಶ್ರೀಗಳು ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಮಠದ ಮುಂಬರುವ ಸೇವಾ ಕಾರ್ಯಗಳಿಗೆ ಸಮಾಜದ ಎಲ್ಲ ವರ್ಗದವರ ಸಹಕಾರ ಅಗತ್ಯ ಎಂದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಠದ ಘನತೆ ಹಾಗೂ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಶ್ರೀಗಳು ಕಟ್ಟುನಿಟ್ಟಾಗಿದ್ದರು. ಅವರ ಚಿಂತನೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದರು.


ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಠ-ಮಾನ್ಯಗಳು ಬಡವರ ಬದುಕಿಗೆ ಆಸರೆಯಾಗಬೇಕು ಎಂಬುದನ್ನು ಚಿದಾನಂದ ಶ್ರೀಗಳು ತಮ್ಮ ಕಾರ್ಯದ ಮೂಲಕ ನಿರೂಪಿಸಿದ್ದಾರೆ. ಇಂದಿನ ಕಿರಿಯ ಪೀಠಾಧ್ಯಕ್ಷರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಮಠವನ್ನು ಮುನ್ನಡೆಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ದೇವನೂರು ಮಠದ ಮಹಾಂತ ಸ್ವಾಮೀಜಿ, ಕನಕಪುರ ದೇಗುಲ ಮಠದ ಡಾ.ಚೆನ್ನಬಸವ ಸ್ವಾಮೀಜಿ, ಹೊಸಮಠದ ನೂತನ ಪೀಠಾಧ್ಯಕ್ಷ ಸಿದ್ದಬಸವ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.