
ಪುರಾಣದ ಪ್ರೇಮಕಾವ್ಯಕ್ಕೆ ಆಧುನಿಕ ಸ್ಪರ್ಶ
ಪುರಾಣದ ದುಷ್ಯಂತ–ಶಾಕುಂತಲೆಯ ಪ್ರೇಮಕಥೆಯ ಕಾವ್ಯಾತ್ಮಕ ಸ್ಪರ್ಶದೊಂದಿಗೆ ಆಧುನಿಕ ಪ್ರೇಮದ ಭಾವನೆಗಳನ್ನು ಬೆಸೆಯುವ ‘ನೆನಪಾದಳು ಶಾಕುಂತಲೆ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇತ್ತೀಚೆಗೆ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದ ಮುಂದೆ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರತಂಡ ಚಿತ್ರೀಕರಣಕ್ಕೆ ತೆರೆ ಎಳೆದಿದೆ. ಸದ್ಯ ಸೆನ್ಸಾರ್ ಹಂತದಲ್ಲಿರುವ ಚಿತ್ರವನ್ನು ನವೆಂಬರ್ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.
ಕಿರಣ್ ಹಳ್ಳಿಮೈಸೂರು ಅರ್ಪಿಸುವ ಈ ಚಿತ್ರವನ್ನು ವಿಸ್ಮಯ ವೆಂಚರ್ಸ್ ಮೂಲಕ ವಿಸ್ಮಯ ಕೆ. ನಿರ್ಮಿಸಿದ್ದಾರೆ. ಭಾಸ್ಕರನ್ ಮುತ್ತುಸ್ವಾಮಿ ಸಹ ನಿರ್ಮಾಪಕರಾಗಿದ್ದಾರೆ. ಈ ಹಿಂದೆ ‘ಸಾಲ್ಟ್’ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಣ ಸಂಸ್ಥೆ, ಐದು ವರ್ಷಗಳ ಬಳಿಕ ವಿಭಿನ್ನ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ವಿನಯ್ ಚಂದ್ರಹಾಸ ಮತ್ತು ವಿರಾಜ್ ಕೋಲಾಟ್ಲು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದು, ವಿನಯ್ ಚಂದ್ರಹಾಸ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಪಾರ್ಥಸಾರಥಿ ಎಂಬ ಯುವ ಸ್ಟಾರ್ಟ್ಅಪ್ ಸಂಸ್ಥಾಪಕನ ಪ್ರೇಮಪಯಣವೇ ಚಿತ್ರದ ಕಥೆಯ ತಿರುಳು. ಮೊದಲ ಪ್ರೀತಿಯ ವೈಫಲ್ಯದಿಂದ ಹೊರಬರಲು ನಾಯಕ ತನ್ನ ಅಕ್ಕನ ಊರಿಗೆ ಬರುತ್ತಾನೆ. ಅಲ್ಲಿನ ಹಳೆಯ ಗ್ರಂಥಾಲಯದಲ್ಲಿ ಯುವತಿಯೊಬ್ಬಳ ಪರಿಚಯವಾಗುತ್ತದೆ. ಆಕೆಯ ಸಾನ್ನಿಧ್ಯದಿಂದ ನಾಯಕನ ಬದುಕಿನ ದಿಕ್ಕೇ ಬದಲಾಗುತ್ತದೆ. ಹೀಗೆ ನೆನಪು, ಪ್ರೀತಿ ಮತ್ತು ಹಂಬಲಗಳ ನಡುವೆ ಸಾಗುವ ಕಥೆಗೆ ಪುರಾಣದ ದುಷ್ಯಂತ–ಶಾಕುಂತಲೆಯ ಪ್ರೇಮದ ನೆರಳನ್ನು ಬೆಸೆಯಲಾಗಿದೆ.
ರಂಗಭೂಮಿ ಹಿನ್ನೆಲೆಯ ವಿರಾಜ್ ಕೋಲಾಟ್ಲು ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಕಾವ್ಯ ಭಗವಂತ್ ನಾಯಕಿಯಾಗಿ ನಟಿಸಿದ್ದು, ತಬಲಾ ನಾಣಿ, ಮಂಡ್ಯ ರಮೇಶ್, ಸ್ಪಂದನ ಪ್ರಸಾದ್, ಸುನೇತ್ರ ಪಂಡಿತ್, ಮೂಗು ಸುರೇಶ್ ಹಾಗೂ ಹರ್ಷವರ್ಧನ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಸನ್ನಕುಮಾರ್ ಎಂ.ಎಸ್. ಸಂಗೀತ ಸಂಯೋಜಿಸಿದ್ದು, ಚಿತ್ರದ ಐದೂ ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ವಿಶಾಲ್ ಕುಮಾರ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ.
ಆಧುನಿಕ ಬದುಕಿನ ಪ್ರೇಮದ ತಲ್ಲಣಗಳನ್ನು ಪುರಾಣದ ಕಾವ್ಯಾತ್ಮಕ ಸೊಗಡಿನೊಂದಿಗೆ ಕಟ್ಟಿಕೊಡುವ ಪ್ರಯತ್ನ ‘ನೆನಪಾದಳು ಶಾಕುಂತಲೆ’ ಚಿತ್ರದಲ್ಲಿದೆ. ವಿಭಿನ್ನ ಶೀರ್ಷಿಕೆ ಹಾಗೂ ಭಾವನಾತ್ಮಕ ಕಥಾಹಂದರದ ಮೂಲಕ ಗಮನ ಸೆಳೆಯುತ್ತಿರುವ ಈ ಸಿನಿಮಾ, ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ ಎಂದು ಚಿತ್ರದ ಕ್ರಿಯೇಟಿವ್ ಹೆಡ್ ಕಿರಣ್ ಹಳ್ಳಿಮೈಸೂರು ತಿಳಿಸಿದ್ದಾರೆ.























