Home ಸಿನೆಮಾ ಚಿತ್ರರಂಗದ ಒಳಜಗತ್ತಿನ ಅನಾವರಣ

ಚಿತ್ರರಂಗದ ಒಳಜಗತ್ತಿನ ಅನಾವರಣ

ನಿರ್ಮಾಪಕರ ಸಂಕಷ್ಟ, ಕಮಿಷನ್ ದಂಧೆಯ ಸುತ್ತ ಕಥೆ

ಸಿನಿಮಾ ಜಗತ್ತು ಹೊರಗಿನಿಂದ ಬಣ್ಣಬಣ್ಣವಾಗಿ ಕಂಡರೂ, ಅದರ ಹಿಂದಿರುವ ಸವಾಲುಗಳು ಮತ್ತು ಕಹಿ ಅನುಭವಗಳು ಅನೇಕರಿಗೆ ತಿಳಿದಿರುವುದಿಲ್ಲ. ನಿರ್ಮಾಪಕರು ಎದುರಿಸುವ ಆರ್ಥಿಕ ಸಂಕಷ್ಟ, ಕಮಿಷನ್ ದಂಧೆ ಹಾಗೂ ಚಿತ್ರರಂಗಕ್ಕೆ ಹೊಸದಾಗಿ ಬರುವವರನ್ನು ದಾರಿ ತಪ್ಪಿಸುವ ವ್ಯವಸ್ಥೆಯ ಕೆಲವು ಮುಖಗಳನ್ನು ಅನಾವರಣಗೊಳಿಸಲು ಸಿದ್ಧವಾಗಿದೆ ‘18 ಎಕರೆ ಸಿನಿಮಾ ಲಕ್ಕಪ್ಪ’. ನಿರ್ದೇಶಕ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ.

ವಾಸ್ತವ ಘಟನೆಗಳಿಂದ ಪ್ರೇರಿತವಾದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಿನಿಮಾ ನಿರ್ಮಾಣದ ಸಂದರ್ಭದಲ್ಲಿ ನಿರ್ಮಾಪಕರು ಹೇಗೆ ಕಮಿಷನ್ ದಂಧೆಗೆ ಸಿಲುಕಿ ಹಣ ಕಳೆದುಕೊಳ್ಳುತ್ತಾರೆ ಎಂಬುದನ್ನು ನೈಜವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಚಿತ್ರ ನಿರ್ಮಾಣದ ಅನುಭವವಿಲ್ಲದೆ ಚಿತ್ರರಂಗಕ್ಕೆ ಕಾಲಿಡುವವರನ್ನು ಕೆಲವು ಮ್ಯಾನೇಜರ್‌ಗಳು ಹೇಗೆ ನಂಬಿಸಿ ವಂಚಿಸುತ್ತಾರೆ ಎಂಬುದೂ ಕಥೆಯ ಪ್ರಮುಖ ಭಾಗವಾಗಿದೆ. ಕಲಾವಿದರ ಬದುಕು ಮತ್ತು ಸಿನಿಮಾ ಜಗತ್ತಿನ ನಡುವಿನ ಸಂಬಂಧವನ್ನು ಪ್ರತಿಬಿಂಬಿಸುವ ಮೂಲಕ ಚಿತ್ರರಂಗದ ಮತ್ತೊಂದು ಮುಖವನ್ನು ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಮುಂದಾಗಿದೆ.

ಕಂಟೆಂಟ್ ಆಧಾರಿತ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ವಿ.ಕುಮಾರ್, ಈ ಹಿಂದೆ ‘ಮಾರ್ಲಾಮಿ’, ‘ರುದ್ರ ಕಾಲಭೈರವ’, ‘ಲೋ ಬಜೆಟ್ ನೋ ಬಜೆಟ್’ ಹಾಗೂ ‘ಪವನಸುತ’ ಚಿತ್ರಗಳಿಗೆ ನಿರ್ದೇಶನ ನೀಡಿದ್ದಾರೆ. ‘ಮಾರ್ಲಾಮಿ’ ಬಿಡುಗಡೆಗೆ ಸಿದ್ಧವಾಗಿದ್ದರೆ, ಇತರ ಕೆಲವು ಚಿತ್ರಗಳು ಚಿತ್ರೀಕರಣದ ವಿವಿಧ ಹಂತಗಳಲ್ಲಿವೆ. ತಮಿಳಿನಲ್ಲಿ ‘ಮರ್ಮಮುಟುಚಿ’, ‘ಕಾದಲ್ ವಾರ್’ ಹಾಗೂ ‘ಗಾಯತ್ರಿ ನಿಲಮ್’ ಚಿತ್ರಗಳಿಗೂ ಅವರು ನಿರ್ದೇಶನ ನೀಡಿದ್ದಾರೆ.

ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೆ.ದಯಾನಂದ್, ಎ.ಸುಬ್ರಮಣಿ, ರಾಮಗೊಂಡನಹಳ್ಳಿ ಹಾಗೂ ಅವರ ಸ್ನೇಹಿತರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿ.ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜವಾಬ್ದಾರಿ ಹೊತ್ತಿದ್ದಾರೆ. ತಸೀ ರಂಗರಾಜನ್ ಸಂಗೀತ, ಅರುಣ್ ಛಾಯಾಗ್ರಹಣ ಹಾಗೂ ದುರ್ಗಾಪ್ರಸಾದ್ ಸಂಕಲನ ಚಿತ್ರಕ್ಕಿದೆ.

ಮಂಡ್ಯ, ಕೀಲಾರ, ಬೆಂಗಳೂರು, ಸಕಲೇಶಪುರ ಹಾಗೂ ಶ್ರವಣಬೆಳಗೊಳದ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ದೊರೆತಿದೆ. ಹರಿಚೇತು ಹಾಗೂ ಸಂಜನಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸಂಗೀತ, ಸುಬ್ರಮಣಿ, ರಾಜಶೇಖರ, ದಯಾನಂದ, ಸತ್ಯಸಾಮ್ರಾಟ್, ಲಿಂಗೇಶ್, ನಯನಕೃಷ್ಣ, ಜೂನಿಯರ್ ದ್ವಾರಕಿ, ಶ್ರೀನಿವಾಸ ಹಾಗೂ ದುಬೈ ರಫೀಕ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

ಚಿತ್ರರಂಗದ ಆಕರ್ಷಣೆಯ ಹಿಂದೆ ಅಡಗಿರುವ ವಾಸ್ತವಗಳು, ಹೊಸಬರ ಅನುಭವಗಳು ಹಾಗೂ ನಿರ್ಮಾಪಕರ ಸಂಕಷ್ಟಗಳನ್ನು ತೆರೆದಿಡುವ ಉದ್ದೇಶ ಹೊಂದಿರುವ ‘18 ಎಕರೆ ಸಿನಿಮಾ ಲಕ್ಕಪ್ಪ’, ಈ ತಿಂಗಳ ಬಿಡುಗಡೆಯೊಂದಿಗೆ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದೆ.