
ಸಂಜೆವಾಣಿ ನ್ಯೂಸ್
ಮೈಸೂರು, ಜು.13:- ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಪ್ರತಿಯೊಂದು ಗ್ರಾಮಗಳಿಗೂ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ಭರವಸೆ ನೀಡಿದರು.
ಕೆಲ್ಲಹಳ್ಳಿ ಮತ್ತು ಗುಜ್ಜೇಗೌಡನಪುರ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ 3 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಕೆಲ್ಲಹಳ್ಳಿ ಗ್ರಾಮದಲ್ಲಿ 50 ಲಕ್ಷ ರೂ.ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದಲ್ಲಿ ಈಗಾಗಲೇ 3 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಬಾಕಿ ಇರುವ ರಸ್ತೆ ಅಭಿವೃದ್ಧಿ ಕಾಮಗಾರಿಯೂ ಶೀಘ್ರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಕೆರೆಗೆ ನೀರು ಬಿಡಲು ಹಾಕಿದ್ದ ಪೈಪ್ ಲೈನ್ ಹಾಳಾಗಿತ್ತು. ಹೊಸದಾಗಿ ಪೈಪ್ ಲೈನ್ ಅಳವಡಿಸಲು ಟೆಂಡರ್ ಆಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಿ ಶೀಘ್ರವಾಗಿ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನ ನವೀಕರಣಕ್ಕೆ ಈಗಾಗಲೇ 10 ಲಕ್ಷ ರೂ.ಅನುದಾನ ನೀಡಲಾಗಿದೆ. ಬಾಕಿ ಕಾಮಗಾರಿ ಕೈಗೊಳ್ಳಲು 8 ಲಕ್ಷ ರೂ.ಮಂಜೂರು ಮಾಡಲಾಗಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಗುಜ್ಜೇಗೌಡನಪುರದಲ್ಲಿ 50 ಲಕ್ಷ ಕಾಮಗಾರಿ:
ನಂತರ ಗುಜ್ಜೇಗೌಡನಪುರ ಗ್ರಾಮದಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಮದಲ್ಲಿ ಇನ್ನೂ ಮೂರು ರಸ್ತೆಗಳು ಬಾಕಿ ಇದ್ದು, ಈ ಅನುದಾನದಲ್ಲೇ ಆ ರಸ್ತೆಗಳನ್ನು ಕೈಗೊಳ್ಳಲಾಗುವುದು. ಇದರಿಂದ ಗುಜ್ಜೇಗೌಡನಪುರ ಗ್ರಾಮವು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ಗ್ರಾಮಸ್ಥರು ಶ್ರೀ ಬಸವೇಶ್ವರ ದೇವಸ್ಥಾನ ನವೀಕರಣಕ್ಕೆ ಅನುದಾನ ನೀಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ಅಂದಾಜು ಪಟ್ಟಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮದ್ದೂರಿನಲ್ಲಿ ಅಂಗನವಾಡಿ ಉದ್ಘಾಟನೆ, ದೇವಸ್ಥಾನಕ್ಕೆ ಚಾಲನೆ: ಮದ್ದೂರು ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ 50 ಲಕ್ಷ ರೂ.ವೆಚ್ಚದಲ್ಲಿ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಕ್ಷೇತ್ರದಲ್ಲಿ ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳ ಪುನರ್ ನಿರ್ಮಾಣ ಸೇರಿದಂತೆ ಇನ್ನಿತರ ಕಟ್ಟಡಗಳಿಗೆ ಸಾಕಷ್ಟು ಅರ್ಜಿಗಳು ಬರುತ್ತಿವೆ. ಶಾಸಕರ ನಿಧಿಯಿಂದ ಬರುವ ಅನುದಾನವನ್ನು ಹಂಚಿಕೆ ಮಾಡುವ ಜತೆಗೆ, ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಶಾಸಕನಾದ ಮೇಲೆ ಕ್ಷೇತ್ರದ ಅಭಿವೃದ್ಧಿಯೇ ತಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಿಗೂ ಉಣುವಾಡಿ ಯೋಜನೆಯಿಂದ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ: ಇತ್ತೀಚೆಗೆ ನಿಧನ ಹೊಂದಿದ ರವಿ ಸ್ಮರಣಾರ್ಥ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕರು, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಾಗಿದೆ. ಕ್ರೀಡೆಯಿಂದ ಸಹೋದರತ್ವ, ಸಾಮರಸ್ಯ ಮೂಡಲಿದೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜುಂಪುರ ಜವರನಾಯಕ, ದಾರಿಪುರ ಬಸವಣ್ಣ, ಮುತಾಲಿಕ್, ಶ್ರೀಕಾಂತ್, ರೇಣುಕಾ, ಶಿವರಾಜು, ರಂಗಸ್ವಾಮಿ, ಕೆಲ್ಲಹಳ್ಳಿ ಗ್ರಾಮದ ವಿಜಯ್, ನಾಗರಾಜು, ಭೈರೇಶ್, ಮಂಜು, ನಿಂಗರಾಜು, ಹಾರೋಹಳ್ಳಿ ಮೂರ್ತಿ, ಮಹಾದೇವಪ್ಪ, ಚಂದ್ರ, ಜಿ.ಜಿ.ಪುರದ ಚೆನ್ನಕೇಶವೇಗೌಡ, ಸಿದ್ದರಾಜು, ಶಂಭು, ಮದ್ದೂರಿನ ಶಿವಣ್ಣ, ಕೆಂಡಗಣ್ಣ, ಹರೀಶ್, ಶ್ರೀಧರ್, ಮಹೇಂದ್ರ, ರಘು, ಗುರುಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

































