Home ಸಿನೆಮಾ ಕಿಡಿ ಹೊತ್ತಿಸಿದ ‘ಸ್ಪಾರ್ಕ್’ ಮೊದಲ ಹಾಡು

ಕಿಡಿ ಹೊತ್ತಿಸಿದ ‘ಸ್ಪಾರ್ಕ್’ ಮೊದಲ ಹಾಡು

ಸೆಪ್ಟೆಂಬರ್ 25ಕ್ಕೆ ಚಿತ್ರ ಬಿಡುಗಡೆ

‘ಸ್ಪಾರ್ಕ್’ ಚಿತ್ರದ ಮೊದಲ ಗೀತೆ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಅದ್ಧೂರಿ ವೇದಿಕೆಯಲ್ಲಿ ಅನಾವರಣಗೊಂಡ ಈ ಹಾಡು ಸಂಗೀತ, ನೃತ್ಯ ಹಾಗೂ ಭವ್ಯ ದೃಶ್ಯ ವೈಭವದ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಾಯಕ ನಿರಂಜನ್ ಸುಧೀಂದ್ರ ಹಾಗೂ ನಾಯಕಿ ರಚನಾ ಇಂದರ್ ಹೆಜ್ಜೆ ಹಾಕಿರುವ ಈ ಹಾಡು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಚಿತ್ರತಂಡ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪ್ರೇಮ್, “ನಿರಂಜನ್ ಸುಧೀಂದ್ರ ಕನ್ನಡದ ಪ್ರತಿಭಾವಂತ ನಟ. ಯುವ ನಾಯಕನ ಮೇಲೆ ಅಪಾರ ವಿಶ್ವಾಸವಿಟ್ಟು ಚಿತ್ರ ನಿರ್ಮಿಸಿರುವುದು ಶ್ಲಾಘನೀಯ. ‘ಸ್ಪಾರ್ಕ್’ ಉತ್ತಮ ಯಶಸ್ಸು ಸಾಧಿಸಲಿ” ಎಂದು ಹಾರೈಸಿದರು.

ಈ ಹಾಡನ್ನು ಉಪೇಂದ್ರ ಅವರಿಗೆ ತೋರಿಸಿದ್ದೆ. ದೊಡ್ಡ ಸ್ಟಾರ್‌ಗೆ ಸಿಗುವ ಮಟ್ಟದ ಹಾಡು ನಿನಗೆ ಸಿಕ್ಕಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಅತ್ಯಂತ ವಿಭಿನ್ನವಾಗಿ ಕೆಲಸ ಮಾಡಿದ್ದಾರೆ ಎಂದು ನಾಯಕ ನಿರಂಜನ್ ಸುಧೀಂದ್ರ ಹೇಳಿದರು.

ನಾಯಕಿ ರಚನಾ ಇಂದರ್, “ಇದು ನನ್ನ ಮೊದಲ ಕಮರ್ಷಿಯಲ್ ಡ್ಯಾನ್ಸ್ ಸಾಂಗ್. ಜೊತೆಗೆ ಮೊದಲ ಬಾರಿಗೆ ಇಷ್ಟು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು.

ನಿರ್ದೇಶಕ ಮಹಾಂತೇಶ್ ಹಂದ್ರಾಳ್, “ಸುಮಾರು ಒಂದು ವರ್ಷದ ಪರಿಶ್ರಮದ ಫಲವಾಗಿ ಈ ಚಿತ್ರ ಮೂಡಿಬಂದಿದೆ. ಕಲ್ಪಿಸಿಕೊಂಡಿದ್ದನ್ನು ತೆರೆಯ ಮೇಲೆ ತರಲು ಸಾಧ್ಯವಾಗಿದೆ. ವಿಶೇಷವಾಗಿ ಪ್ರೇಮ್ ಅವರು ನೆಗೆಟಿವ್ ಪಾತ್ರವನ್ನು ಒಪ್ಪಿಕೊಂಡು ನಮ್ಮ ತಂಡಕ್ಕೆ ಬೆಂಬಲ ನೀಡಿರುವುದು ದೊಡ್ಡ ಶಕ್ತಿ” ಎಂದರು.

ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡಿರುವ ಸಚಿನ್ ಬಸ್ರೂರು, “ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಈ ಆಲ್ಬಮ್ ನನ್ನ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ ಎಂಬ ವಿಶ್ವಾಸವಿದೆ. ಚಿತ್ರದಲ್ಲಿ ಪ್ರೇಮ್ ಅವರಿಗೂ ವಿಶೇಷ ಹಾಡಿದೆ” ಎಂದು ತಿಳಿಸಿದರು.

ಗೀತರಚನೆಕಾರ ಪ್ರಮೋದ್ ಮರವಂತೆ, “ಈ ಹಾಡಿನ ಹಿಂದಿ ಆವೃತ್ತಿಯ ಸಾಹಿತ್ಯವನ್ನೂ ನಾನೇ ಬರೆದಿದ್ದೇನೆ. ಕನ್ನಡ ಆವೃತ್ತಿಯಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಬಳಸಿದ್ದು ನನಗೆ ವಿಶೇಷ ಸಂತೋಷ ತಂದಿದೆ” ಎಂದು ಹೇಳಿದರು.

ನಟ ಶರಣ್ ಹಾಗೂ ಗಾಯಕಿ ಸಂಗೀತಾ ರವೀಂದ್ರನಾಥ್ ಧ್ವನಿಯಲ್ಲಿ ಮೂಡಿಬಂದಿರುವ ಈ ಗೀತೆಯನ್ನು ಕಾರ್ಯಕ್ರಮದಲ್ಲಿ ಸಂಗೀತಾ ರವೀಂದ್ರನಾಥ್ ಮತ್ತು ಸಚಿನ್ ಬಸ್ರೂರು ನೇರವಾಗಿ ಹಾಡಿ ರಂಜಿಸಿದರು.

ನಿರ್ಮಾಪಕರಾದ ಗರಿಮಾ ಮತ್ತು ಅವಿನಾಶ್ ವಸಿಷ್ಠ, ಲಹರಿ ಸಂಸ್ಥೆಯ ಮನೋಹರ್ ಅವರೊಂದಿಗೆ ವೇದಿಕೆಯಲ್ಲಿ ಹಾಡನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಸಂಕಲನಕಾರ ಮಧು, ಛಾಯಾಗ್ರಾಹಕ ಸ್ವಾಮಿ ಜೆ. ಗೌಡ, ನಟ ಮಹಾಂತೇಶ ಹಿರೇಮಠ, ಧರ್ಮಣ್ಣ ಕಡೂರು, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಗೂ ಸಂಭಾಷಣೆಕಾರ ರಘು ನಿಡುವಳ್ಳಿ ಸೇರಿದಂತೆ ಚಿತ್ರದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆಕ್ಷನ್, ಭಾವನೆ ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡಿರುವ ‘ಸ್ಪಾರ್ಕ್’ ಚಿತ್ರವು ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.