
ಸಂಜೆವಾಣಿ ನ್ಯೂಸ್
ಮೈಸೂರು, ಜು.13:- ಆಷಾಢ ಮಾಸದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಹರಕೆ ತೀರಿಸಲು ಚಾಮುಂಡಿ ಬೆಟ್ಟದ ಮೆಟ್ಟಲುಗಳ ಮೂಲಕ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಆಗಮಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಮೆಟ್ಟಲುಗಳು ಮತ್ತು ಗೋಪುರಗಳು ಸುಂದರವಾಗಿ ಕಾಣುವಂತೆ ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್ ಯುವಕರು ಸ್ವಚ್ಛತೆ ಮತ್ತು ಬಣ್ಣ ಬಳಿಯುವ ಕಾರ್ಯ ನಡೆಸಿದರು.
ಕಳೆದ 6 ವರ್ಷಗಳಿಂದ ಪ್ರತಿ ವರ್ಷ ಆಷಾಢ ಮಾಸದಲ್ಲಿ ಮೆಟ್ಟಲುಗಳು ಹಾಗೂ ಗೋಪುರಗಳಿಗೆ ಸುಣ್ಣ ಮತ್ತು ಬಣ್ಣ ಬಳಿಯುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
“ಭಕ್ತರು ಸ್ವಚ್ಛತೆ ಕಾಪಾಡಿ”
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಯದುನಂದನ್ ಜಿ, ಭಕ್ತಾದಿಗಳು ದೇವಸ್ಥಾನದ ಆವರಣದ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು.
“ಸ್ನೇಹಿತರೆಲ್ಲ ಸೇರಿ ತಾಯಿ ಚಾಮುಂಡೇಶ್ವರಿ ಅಮ್ಮನ ಸೇವೆ ಮಾಡುವ ಮೂಲಕ ಒಂದು ಅಳಿಲು ಸೇವೆ ಮಾಡುತ್ತಿದ್ದೇವೆ” ಎಂದು ಅವರು ತಿಳಿಸಿದರು.
ಈ ಸೇವಾ ಕಾರ್ಯದಲ್ಲಿ ಶಿವ ನಾಯಕ್, ಕೃಷ್ಣ, ವೆಂಕಟೇಶ, ಪಾಪಣ್ಣ, ಧನು, ಮಾದೇಶ್, ವೀರು, ಗಣೇಶ್, ಆಟೋ ಸ್ವಾಮಿ, ನಾಗೇಶ್ ಎಂ.ಆರ್ ಸೇರಿದಂತೆ ಟ್ರಸ್ಟ್ ಸದಸ್ಯರು ಹಾಗೂ ಇನ್ನಿತರರು ಹಾಜರಿದ್ದರು.

































