Home ಜಿಲ್ಲೆ ಮೈಸೂರು ಅಕಾಲಿಕ ಮಳೆ ಹಾನಿ: ನಿರಾಶ್ರಿತರಿಗೆ ಸ್ಪಂದಿಸಿದ ಮಾಜಿ ಶಾಸಕ ಮಂಜುನಾಥ್

ಅಕಾಲಿಕ ಮಳೆ ಹಾನಿ: ನಿರಾಶ್ರಿತರಿಗೆ ಸ್ಪಂದಿಸಿದ ಮಾಜಿ ಶಾಸಕ ಮಂಜುನಾಥ್

ಸಂಜೆವಾಣಿ ವಾರ್ತೆ
ಹುಣಸೂರು,ಮಾ.20:
– ಹನಗೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಸಿದ ಬಿರುಗಾಳಿ- ಮಳೆಯಿಂದ ಹಾನಿಯಾಗಿರುವ ಗ್ರಾಮಗಳಿಗೆ ಮಾಜಿ ಶಾಸಕರಾದ ಹೆಚ್.ಪಿ.ಮಂಜುನಾಥ್ ಭೇಟಿ ನೀಡಿ ನೊಂದ ಜನತೆಗೆ ಆತ್ಮಸ್ಥೈರ್ಯ ತುಂಬಿ ಹಾನಿಗೀಡಾಗಿರುವ


ದಾಸನಪುರ ಗ್ರಾಮದ 23 ಮನೆಗಳು, ಕಿರಂಗೂರು ಗ್ರಾಮದ 2 ಮನೆಗಳು, ಕಾಮಗೌಡನಹಳ್ಳಿಯಲ್ಲಿ ಒಂದು ಮನೆ, ಹಾಗೂ ಹರಳಳ್ಳಿಯಲ್ಲಿ ಒಂದು ಮನೆ ಸೇರಿದಂತೆ ಒಟ್ಟು 27
ಮನೆಗಳಿಗೆ ಹೆಂಚು, ಕಲ್ನಾರು ಶೀಟು, ಮರಮುಟ್ಟುಗಳು ಹಾಗೂ ಧನಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.


ಇದಲ್ಲದೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳನ್ನು ದುರಸ್ತಿ ಪಡಿಸಲು 50ಸಾವಿರ ರೂ ಹಾಗೂ ಅಗತ್ಯವಾಗಿರುವಷ್ಟು ಹೆಂಚುಗಳನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರುಗಳಿಗೆ ನೀಡಿ ಕೂಡಲೇ ಶಾಲೆ ಕೊಠಡಿಗಳನ್ನು ದುರಸ್ತಿ ಪಡಿಸಲು ತಿಳಿಸಿ, ದುರಸ್ತಿ ವೆಚ್ಚ ಹೆಚ್ಚಾದರೆ ಮತ್ತಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಮಳೆ ಗಾಳಿಗೆ ಸಿಲುಕಿ ಗಾಯಗೊಂಡ ಇಬ್ಬರಿಗೆ ಆಸ್ಪತ್ರೆ ಖರ್ಚು ವೆಚ್ಚಕ್ಕೆ ಧನ ಸಹಾಯ ನೀಡಿದರು.


ಜೊತೆಗೆ ದಾಸನಪುರ, ಹನಗೋಡು ಕಚುವಿನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಹಾನಿಯಾಗಿರುವ ಬಗ್ಗೆ ಚೆಸ್ಕಂನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ಕೈಗೊಂಡು ಕಗ್ಗತ್ತಲಿಂದ ಕೂಡಿರುವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಭಾಗದಲ್ಲಿ ಆಲಿಕಲ್ಲು ಮಳೆಯಿಂದಾಗಿ ತಂಬಾಕು ಮಡಿ ಸಸಿಗಳು, ಬಾಳೆ ಬೆಳೆ, ಕಲ್ಲಂಗಡಿ ಬೆಳೆ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಾದ ಲಕ್ಷ್ಮಿಕಾಂತ್ ರೆಡ್ಡಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಹೆಚ್ಚಿನ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.