
ಪುತ್ತೂರು: ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತ್ರ್ಶಕ್ತಿ, ದುರ್ಗಾವಾಹಿನಿ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನದ ಅಂಗವಾಗಿ ೧೬ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಕಾರ್ಯಕ್ರಮವು ಸೆ. ೫ರಂದು ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ ಬೆಳಗ್ಗೆ ೧೦ ರಿಂದ ನಗರದ ೧೪ ಕೇಂದ್ರಗಳಲ್ಲಿ ದಿ.ಗುರುಕೃಷ್ಣ ಸುಳ್ಯ ಇವರ ಸ್ಮರಣಾರ್ಥ ವೀರ ಹಿಂದೂ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯನ್ನು ಬೊಳುವಾರು ಶ್ರೀ ಅಂಜನೇಯ ಮಂತ್ರಾಲಯದ ಬಳಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕರುಣಾಕರ ಸುವರ್ಣ ಉದ್ಘಾಟಿಸಲಿದ್ದಾರೆ. ವಿಶ್ವಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಬಂಟ್ವಾಳ ಧ್ವಜ ಹಸ್ತಾಂತರ ಮಾಡಲಿದ್ದಾರೆ.
ಸಂಜೆ ೬.೩೦ಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಮಹಿಪಾಲ್ ಹಾಸನ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹುಕ್ರಪ್ಪ ಮತ್ತು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನ ಚೇರ್ಮೆನ್ ಬಲರಾಮ ಆಚಾರ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಶೋಭಾಯಾತ್ರೆಯು ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಿಂದ ಆರಂಭಗೊಂಡು ಮುಖ್ಯ ರಸ್ತೆಯ ಮೂಲಕ ಸಾಗಿ ಅಂಚೆ ಕಚೇರಿಯ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಶೋಭಾಯಾತ್ರೆ ಮುಂದುವರಿದು ಮುಖ್ಯ ರಸ್ತೆಯಿಂದ ಸಾಗಿ ಬಸ್ಸು ನಿಲ್ದಾಣವನ್ನು ಹಾದು ಕಲ್ಲಾರೆ ತನಕ ಸಾಗಿ ಹಿಂದಿರುಗಿ ಬಳಿಕ ಅರುಣಾ ಕಲಾ ಮಂದಿರದ ಬಳಿಯಿಂದ ಬಲಕ್ಕೆ ತಿರುಗಿ ಎಪಿಎಂಸಿ ರಸ್ತೆಯ ಮೂಲಕ ಸಾಗಿ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಸಮಾಪನಗೊಳ್ಳಲಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ೮ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ೧೫೦ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪ್ರೌಢಶಾಲೆ ಮತ್ತು ಪ.ಪೂ. ತರಗತಿಯ ವಿದ್ಯಾರ್ಥಿಗಳಿಗೆ ಕಬಡ್ಡಿ ಪಂದ್ಯಾಟ ಹಾಗೂ ದಿ. ಟಿ. ರಾಧಾಕೃಷ್ಣ ಭಟ್ ಸ್ಪರಣಾರ್ಥ ೬೫ ಕೆಜಿ ವಿಭಾಗದ ಮ್ಯಾಟ್ ಅಂಕಣದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ನಡೆಸಲಾಗಿದೆ. ಜೊತೆಗೆ ಶಂಖನಾದ, ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ, ಮುದ್ದುಕೃಷ್ಣ ಇನ್ನಿತರ ಹಲವು ಸ್ಪರ್ಧೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಕಿರಣ್ ಕುಮಾರ್ ರೈ, ಸಹ ಸಂಚಾಲಕ ಲಕ್ಷ್ಮಣ ಪೂಜಾರಿ ಬೈಲಾಡಿ, ವಿಹಿಂಪ ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ, ಸಹ ಕಾರ್ಯದರ್ಶಿ ಶ್ರೀಧರ ತೆಂಕಿಲ ಉಪಸ್ಥಿತರಿದ್ದರು.





























