Home ಜಿಲ್ಲೆ ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ; ಇಲ್ಲದಿದ್ದರೆ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ: ಜಿಲ್ಲಾಡಳಿತಕ್ಕೆ...

ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ; ಇಲ್ಲದಿದ್ದರೆ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ: ಜಿಲ್ಲಾಡಳಿತಕ್ಕೆ ಉಮೇಶ್ ಕೆ. ಮುದ್ನಾಳ್ ಎಚ್ಚರಿಕೆ

ಯಾದಗಿರಿ:ಆ.೪: ನಗರದ ಹೊರವಲಯದಲ್ಲಿರುವ ಯಾದಗಿರಿ ದೊಡ್ಡ ಕೆರೆಗೆ ತಕ್ಷಣ ನೀರು ಹರಿಸಬೇಕು. ಇಲ್ಲವಾದರೆ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ದೊಡ್ಡ ಕೆರೆಯಲ್ಲೇ ರೈತರೊಂದಿಗೆ ಧಿಢೀರ್ ಪ್ರತಿಭಟನೆ ನಡೆಸಿದ ಅವರು, ಮೂರು ವರ್ಷಗಳ ಹಿಂದೆ ಸನ್ನತಿ ಬ್ರಿಜ್-ಕಂ-ಬ್ಯಾರೇಜ್‌ನಿAದ ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸುವ ಉದ್ದೇಶದಿಂದ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿ ಉದ್ಘಾಟನೆ ಮಾಡಲಾಗಿತ್ತು. ಆದರೆ ಇದುವರೆಗೆ ಒಂದು ಹನಿ ನೀರೂ ಕೆರೆಗೆ ಹರಿಸದಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವರ್ಷ ಮುಂಗಾರು ಮಳೆ ಸಮರ್ಪಕವಾಗಿ ಆಗದ ಹಿನ್ನೆಲೆಯಲ್ಲಿ ರೈತರು ನೀರಾವರಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮನವಿಯನ್ನು ಗಂಭೀರವಾಗಿ ಪರಿಗಣಿಸದ ಜಿಲ್ಲಾಡಳಿತ ಕೈಕಟ್ಟಿ ಕುಳಿತಿರುವುದು ಖಂಡನೀಯ ಎಂದು ಅವರು ಆರೋಪಿಸಿದರು.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಭೀಮಾ ನದಿಯಲ್ಲಿ ಸುಮಾರು ೫೦ ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಹೆಚ್ಚಿನ ಪ್ರಮಾಣದ ನೀರು ತೆಲಂಗಾಣದತ್ತ ಹರಿದು ಹೋಗುತ್ತಿದೆ. ಗುರುಸೂಣಿಗಿ ಬ್ರಿಜ್-ಕಂ-ಬ್ಯಾರೇಜ್‌ನಿAದ ಸುಮಾರು ೩೫ ಕೆರೆಗಳಿಗೆ ಕಳೆದ ಮೂರು ದಿನಗಳಿಂದ ನೀರು ಹರಿಸಲಾಗುತ್ತಿದೆ. ಆದರೆ ಸನ್ನತಿ ಬ್ರಿಜ್-ಕಂ-ಬ್ಯಾರೇಜ್‌ನಿAದ ಯಾದಗಿರಿ ದೊಡ್ಡ ಕೆರೆಗೆ ನಿರ್ಮಿಸಿರುವ ಪೈಪ್‌ಲೈನ್ ಮೂಲಕ ಇನ್ನೂ ನೀರು ಹರಿಸದಿರುವುದು ಅಸಮಂಜಸ ಎಂದು ಹೇಳಿದರು.

ದೊಡ್ಡ ಕೆರೆಯ ಕೆಳಭಾಗದ ರೈತರು ನೀರಿನ ಕೊರತೆಯಿಂದ ಬಿತ್ತನೆ ಹಾಗೂ ವಿವಿಧ ಬೆಳೆಗಳ ಕೃಷಿ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕೆರೆಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಕೊಳವೆಬಾವಿಗಳಿಗೆ ನೀರು ಲಭ್ಯವಾಗುವುದರ ಜೊತೆಗೆ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ತಿಳಿಸಿದರು.

ಭೀಮಾ ನದಿಯಲ್ಲಿ ಹರಿಯುತ್ತಿರುವ ನೀರನ್ನು ಯಾದಗಿರಿ ದೊಡ್ಡ ಕೆರೆ ಸೇರಿದಂತೆ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹಗಲು-ರಾತ್ರಿ ನಿರಂತರವಾಗಿ ಹರಿಸುವಂತೆ ಸಂಬAಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ಹೆದ್ದಾರಿ ತಡೆದು ರೈತರೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಉಮೇಶ್ ಕೆ. ಮುದ್ನಾಳ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ್ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲಪ್ಪ, ಸೂರಪ್ಪ, ಮಹಾದೇವಪ್ಪ, ಮಹಾಂತೇಶ, ಹಣಮಂತ, ಭೀಮರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ, ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವಕುಮಾರ, ಮಹೇಶ್, ಸುರೇಶ್, ಮಾರ್ತಾಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಹಾಗೂ ಯುವಕರು ಉಪಸ್ಥಿತರಿದ್ದರು.