Home ಜಿಲ್ಲೆ ಮಂಗಳೂರು ಮಳೆ ಆರಂಭವಾದರೂ ತಲೆ ಕೆಡಿಸಿಕೊಳ್ಳದ ಇಲಾಖೆ; ಪುತ್ತೂರು-ಉಪ್ಪಿನಂಗಡಿ ರಸ್ತೆ ಚರಂಡಿಗಿಲ್ಲ ‘ಕ್ಲೀನ್ ಭಾಗ್ಯ

ಮಳೆ ಆರಂಭವಾದರೂ ತಲೆ ಕೆಡಿಸಿಕೊಳ್ಳದ ಇಲಾಖೆ; ಪುತ್ತೂರು-ಉಪ್ಪಿನಂಗಡಿ ರಸ್ತೆ ಚರಂಡಿಗಿಲ್ಲ ‘ಕ್ಲೀನ್ ಭಾಗ್ಯ

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಪುತ್ತೂರು; ಈ ರಸ್ತೆ ಬಗ್ಗೆ ಯಾರೂ ಮಾತನಾಡುವ ಹಾಗಿಲ್ಲ. ಚತುಷ್ಪಥ ರಸ್ತೆಯಾಗಿ ಬಹುತೇಕ ಪರಿವರ್ತನೆಗೊಂಡಿರುವ ರಸ್ತೆಯಲ್ಲಿ ವಾಹನ ಸಂಚಾರ ಸುಲಲಿತ. ಪುತ್ತೂರು ತಾಲೂಕಿನ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತಿವೆ. ಆದರೆ ಇನ್ನೇನು ಮಳೆಗಾಲ ಆರಂಭದ ದಿನಗಳು. ಮಳೆಗಾಲಕ್ಕೆ ಪೂರ್ವ ತಯಾರಿಯಾಗಿ ನಡೆಯಬೇಕಾಗಿದ್ದ ರಸ್ತೆಬದಿಯ ಚರಂಡಿಗಳಿಗೆ ಮಾತ್ರ ಇನ್ನೂ ಕ್ಲೀನ್ ಭಾಗ್ಯ ಸಿಕ್ಕಿಲ್ಲ..!
ಪುತ್ತೂರು-ಉಪ್ಪಿನಂಗಡಿ ನುಡುವೆ ಸುಮಾರು ೧೩ ಕಿಮೀ ರಸ್ತೆ. ಇದರಲ್ಲಿ ಒಂದೆರಡು ಕಡೆಯನ್ನು ಹೊರತು ಪಡಿಸಿದರೆ ಉಳಿದ ಭಾಗವೆಲ್ಲಾ ಚತುಷ್ಪಥ ರಸ್ತೆಯಾಗಿದೆ. ಉಪ್ಪಿನಂಗಡಿಯಿಂದ ಅಲ್ಪ ಸಮಯದಲ್ಲಿ ಪುತ್ತೂರು ತಾಲೂಕು ಕೇಂದ್ರವನ್ನು ಸೇರಲು ಅನುಕೂಲಕರವಾದ ರಸ್ತೆಯಾಗಿ ಬದಲಾಗಿದೆ. ಸೇಡಿಯಾಪು ಬಳಿಯಲ್ಲಿ ಚತುಷ್ಪಥ ರಸ್ತೆಯ ಕಾಮಗಾರಿ ಕುಂಟುತ್ತಿದ್ದರೂ ನಡೆಯುತ್ತಿದೆ. ನೆಕ್ಕಿಲಾಡಿಯಲ್ಲಿ ಹೆದ್ದಾರಿಯನ್ನು ಸಂಪರ್ಕಿಸುವ ಭಾಗದ ರಸ್ತೆ ಮಾತ್ರ ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬುವುದನ್ನು ಹೊರತು ಪಡಿಸಿದರೆ ಪುತ್ತೂರು-ಉಪ್ಪಿನಂಗಡಿ ರಸ್ತೆ ಪ್ರಸ್ತುತ ಕೊರತೆ ಕಾಣದ ರಸ್ತೆಯಾಗಿದೆ.
ಆದರೆ ಈ ಮಳೆಗಾಲ ಕಳೆದ ವರ್ಷದ ಮಳೆಗಾಲದ ಸ್ಥಿತಿಯನ್ನು ಮರುಕಳಿಸುವ ಸಾಧ್ಯತೆಯೂ ಕಂಡುಬರುತ್ತಿದೆ. ಉಪ್ಪಿನಂಗಡಿಯಿಂದ ಪುತ್ತೂರು ತನಕದ ಈ ರಸ್ತೆಯ ಎರಡೂ ಬದಿಗಳಲ್ಲಿ ಮಳೆನೀರು ಹರಿದು ಹೋಗಲು ಸಾಧ್ಯವಿಲ್ಲದಂತೆ ಚರಂಡಿಗಳು ಮುಚ್ಚಿ ಹೋಗಿವೆ. ರಸ್ತೆಯ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕಾದರೆ ಚರಂಡಿಗಳು ದುರಸ್ಥಿಯಾಗಬೇಕು. ಅದೂ ಮಳೆಗಾಲದ ಮೊದಲು ಮಾಡಬೇಕು. ಮುಂಗಾರುಪೂರ್ವದ ಒಂದೆರಡು ಮಳೆಗೆ ಪುತ್ತೂರು-ಉಪ್ಪಿನಂಗಡಿ ರಸ್ತೆ ಬಹುತೇಕ ಕಡೆಗಳಲ್ಲಿ ತೋಡುಗಳಾಗಿ ಬದಲಾಗಿವೆ. ಚರಂಡಿಗಳಲ್ಲಿ ಮಳೆನೀರು ಹರಿಯದೆ ರಸ್ತೆಯಲ್ಲಿಯೇ ಹರಿಯುವಂತಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮಳೆಗಾಲದಲ್ಲಿ ಚತುಷ್ಪಥ ರಸ್ತೆ ಸಂಪೂರ್ಣ ಹಾಳಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಪೊದೆ ಆವೃತ ಚರಂಡಿ
ಪ್ರಸ್ತುತ ಈ ರಸ್ತೆಯ ಚರಂಡಿಗಳಲ್ಲಿ ಹುಲ್ಲು ಪೊದೆಗಳು ಆವರಿಸಿಕೊಂಡಿವೆ. ಕೆಲ ಕಡೆಗಳಲ್ಲಿ ಮಣ್ಣು ತುಂಬಿ ಚರಂಡಿಗಳೇ ಮುಚ್ಚಿ ಹೋಗಿವೆ. ಮಳೆಗಾಲದ ಆರಂಭವಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆ ಈ ಚರಂಡಿಗಳನ್ನು ದುರಸ್ಥಿ ಪಡಿಸಲು ಮುಂದಾಗಿಲ್ಲ. ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು ಲಂಬವಾಗಿ ಕಡಿದ ಪರಿಣಾಮ ಕೆಲ ಕಡೆಗಳಲ್ಲಿ ಗುಡ್ಡದ ಮಣ್ಣು ಜರಿದುಬಿದ್ದಿದೆ. ಅದನ್ನು ತೆರವು ಮಾಡಿಲ್ಲ. ಕೆಲವು ಭಾಗದಲ್ಲಿ ತಡೆಗೋಡೆ ನಿರ್ಮಿಸಿದ್ದರೂ ಅಲ್ಲಿಯೂ ಸಮರ್ಪಕ ಚರಂಡಿಗಳ ನಿರ್ಮಾಣವಾಗಿಲ್ಲ. ಈ ತಡೆಗೋಡೆಗಳ ಬಳಿ ನಿರ್ಮಿಸಿದ ಚಿಕ್ಕ ಚರಂಡಿಗಳಲ್ಲಿ ಮಳೆ ನೀರು ಹರಿಯಲು ಅನುಕೂಲಕರವಾಗಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ತಲೆ ಕೆಡಿಸಿಕೊಳ್ಳದ ಲೋಕೋಪಯೋಗಿ ಇಲಾಖೆ
ಜೂನ್ ತಿಂಗಳ ಎರಡನೇ ವಾರದಲ್ಲಿ ಮುಂಗಾರು ಮಳೆ ಆರಂಭವಾಗುವ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಮೇ ತಿಂಗಳ ಅಂತ್ಯದಲ್ಲಿಯಾದರೂ ಈ ರಸ್ತೆಗಳ ಚರಂಡಿಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಈ ಬಗ್ಗೆ ಲೋಕೋಪಯೋಗಿ ಇಲಾಖೆ ತಲೆ ಕೆಡಿಸಿಕೊಂಡಿರುವುದು ಕಂಡುಬರುತ್ತಿಲ್ಲ. ಮುಂಗಾರು ಮಳೆ ಆರಂಭಗೊಂಡರೆ ಮತ್ತೆ ಈ ಚರಂಡಿಗಳ ಸ್ವಚ್ಛತಾ ಕಾರ್ಯಕ್ಕೆ ದೊಡ್ಡ ತಡೆ ಉಂಟಾಗಲಿದೆ. ಇದರ ಜತೆಗೆ ಉತ್ತಮ ರಸ್ತೆಯೊಂದನ್ನು ನಿರ್ಲಕ್ಷ್ಯದಿಂದ ಹಾಳು ಮಾಡುವ ಅಪಖ್ಯಾತಿಯೂ ಲೋಕೋಪಯೋಗಿ ಇಲಾಖೆಗೆ ಸಿಗಲಿದೆ. ರಸ್ತೆ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕಾದರೆ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ಮೂಲ ಅಂಶವನ್ನೇ ಇಲಾಖೆ ಮರೆತಂತಿದೆ.
ತಕ್ಷಣ ಕೆಲಸ ಆರಂಭಿಸಿ
ಮಳೆ ಆರಂಭಕ್ಕೆ ಮೊದಲು ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಇಲಾಖೆ ಮಾಡಬೇಕಿತ್ತು. ಆದರೆ ಮಾಡಿಲ್ಲ. ಈ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದಿದ್ದರೆ ಮಳೆನೀರು ರಸ್ತೆಗೆ ಬಂದು ಸಮಸ್ಯೆ ಉಂಟಾಗುತ್ತದೆ. ಇದರ ಜತೆಗೆ ರಸ್ತೆಯೂ ಹಾಳಾಗುತ್ತದೆ. ತಕ್ಷಣ ಲೋಕೋಪಯೋಗಿ ಇಲಾಖೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಎರಡೂ ಬದಿಗಳಲ್ಲಿರುವ ಚರಂಡಿಗಳನ್ನು ದುರಸ್ಥಿಗೊಳಿಸುವ ಕೆಲಸ ಮಾಡಬೇಕು. ಇಲಾಖೆ ಈ ಬಗ್ಗೆ ನಿರ್ಲಕ್ಷ ಮನೋಭಾವನೆ ತೊರೆದು ಕೆಲಸ ಮಾಡಬೇಕು-ರತ್ನಾಕರ ಪ್ರಭು ಸಾಮಾಜಿಕ ಸೇವಾ ಕಾರ್ಯಕರ್ತರು.

ಮೇಘಾ ಪಾಲೆತ್ತಾಡಿ