
(ಸಂಜೆವಾಣಿ ವಾರ್ತೆ)
ಜಮಖಂಡಿ, ಅ.22: ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ನಗರವಾಗಿರುವ ಬಳ್ಳಾರಿಯ ಶಿಷ್ಯ ಭಕ್ತರ ಪ್ರಾರ್ಥನೆಯಂತೆ ೨೦೨೭ನೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಸಲು ಅನುಮತಿಯನ್ನು ನಾವಿಂದು ಘೋಷಿಸುತ್ತಿದ್ದೇವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ
ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಹತ್ತನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಿರುವ ಮುಂದಿನ ವರ್ಷ ದಸರಾ ಮಹೋತ್ಸವ ಒಂದು ಹೊಸ ದಾಖಲೆಯನ್ನು ನಿರ್ಮಿಸಲಿದೆಂದರು.
ನವರಾತ್ರಿಯ ಕೊನೆಯ ಹಂತದಲ್ಲಿ ಆಚರಿಸುವ ಆಯುಧ ಪೂಜೆಯು ಮನುಷ್ಯನ ಬದುಕಿನಲ್ಲಿ ವಿಶೇಷವಾದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮಹತ್ವವನ್ನು ಹೊಂದಿದೆ. ಆಯುಧವೆಂದರೆ ಕೇವಲ ಕತ್ತಿ ಬಿಲ್ಲು ಬಾಣಗಳಲ್ಲ. ಇಂದಿನ ಯುಗದಲ್ಲಿ ರೈತನ ನೇಗಿಲು ಕಾರ್ಮಿಕರ ಉಪಕರಣ ಶಿಕ್ಷಕನ ಪುಸ್ತಕ ವೈದ್ಯನ ವೈದ್ಯಕೀಯ ಸಾಧನಗಳು ಸೈನಿಕನ ಶಸ್ತ್ರಾಸ್ತ್ರಗಳು ಚಾಲಕನ ವಾಹನ ಕಲಾವಿದನ ಕುಂಚ ವಿದ್ಯಾರ್ಥಿಯ ಲೇಖನಿ ವಿಜ್ಞಾನಿಯ ಸಂಶೋಧನಾ ಉಪಕರಣ ಇವೆಲ್ಲವೂ ಆಯುಧಗಳೇ ಆಗಿವೆ. ಏಕೆಂದರೆ ಇವೆಲ್ಲವುಗಳು ಮಾನವನ ಬದುಕನ್ನು ಕಟ್ಟುವ ಸಮಾಜವನ್ನು ಬೆಳೆಸುವ ಮತ್ತು ರಾಷ್ಟ್ರದ ಪ್ರಗತಿಗೆ ನೆರವಾಗುವ ಸಾಧನಗಳಾಗಿವೆ ಎಂದರು.
ಆಯುಧ ಪೂಜೆ ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಜವಾಬ್ದಾರಿ ಕಾಯಕದ ಗೌರವ ಮಾನವೀಯ ಮೌಲ್ಯಗಳನ್ನು ನೆನಪಿಸುವ ಸಾಂಸ್ಕೃತಿಕ ಸಂದೇಶವಾಗಿದೆ. ಸಾಧನೆಗಳನ್ನು ಗೌರವಿಸಿ ಕಾಯಕವನ್ನು ಪವಿತ್ರಗೊಳಿಸಿ, ದುರ್ಗುಣಗಳನ್ನು ಜಯಿಸಿ ಸಮಾಜದಲ್ಲಿ ಪ್ರೀತಿ ಸಮಾನತೆ ಮತ್ತು ಸಾಮರಸ್ಯ ಬೆಳೆಸಲು ಸಹಕಾರಿಯಾಗುತ್ತವೆ. ಆಯುಧ ಪೂಜೆಯು ನಮ್ಮ ಕೈಗಳಿಗೆ ಶಕ್ತಿ ಮನಸ್ಸಿಗೆ ವಿವೇಕ ಕಾಯಕಕ್ಕೆ ಗೌರವ ಮತ್ತು ಸಮಾಜಕ್ಕೆ ಸಾಮರಸ್ಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಮನುಷ್ಯನ ಕೈಯಲ್ಲಿರುವ ಆಯುಧಕ್ಕಿಂತ ಅವನ ಮನಸ್ಸಿನಲ್ಲಿರುವ ವಿವೇಕ ದೊಡ್ಡದು. ಕೈಯಲ್ಲಿರುವ ಶಸ್ತ್ರಕ್ಕಿಂತ ಹೃದಯದಲ್ಲಿರುವ ಕರುಣೆ ಶ್ರೇಷ್ಠ. ಹೊರಗಿನ ಶಕ್ತಿಗಿಂತ ಅಂತರಂಗದ ಶುದ್ಧತೆ ಮಹತ್ವದ್ದು. ಆದ್ದರಿಂದ ಆಯುಧ ಪೂಜೆಯು ನಮಗೆ ಶಕ್ತಿಯ ಜೊತೆಗೆ ಸಂಯಮವನ್ನು ಸಾಮರ್ಥ್ಯದ ಜೊತೆಗೆ ಸನ್ನಡತೆಯನ್ನು ಅಧಿಕಾರದ ಜೊತೆಗೆ ಜವಾಬ್ದಾರಿಯನ್ನು ಕಲಿಸುತ್ತದೆ ಎಂದು ತಿಳಿಸಿದರು.
ಕಾರ್ಮಿಕನ ದುಡಿಮೆಯಿಂದ ಕಟ್ಟಡಗಳು ನಿರ್ಮಾಣವಾಗುತ್ತವೆ. ಶಿಕ್ಷಕರ ಜ್ಞಾನದಿಂದ ಸಮಾಜ ಬೆಳೆಯುತ್ತದೆ. ವೈದ್ಯನ ಸೇವೆಯಿಂದ ಜೀವಗಳು ಉಳಿಯುತ್ತವೆ. ಮನುಷ್ಯ ಬಳಸುವ ಪ್ರತಿಯೊಂದು ವಸ್ತುವಿನಲ್ಲಿ ಗೌರವ ಭಾವನೆಯನ್ನು ಹೊಂದಿ, ಮುನ್ನಡೆಯುವುದರಿಂದ ಶಕ್ತಿ ಪ್ರಾಪ್ತವಾಗುತ್ತದೆ. ಕಾಯಕವೇ ಕಳಾ ಚೈತನ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧಾರ್ಮಿಕ ಆಚರಣೆಯಲ್ಲಿ ಪುರುಷರಿಗೆ ಕೊಟ್ಟಷ್ಟೇ ಅವಕಾಶವನ್ನು ಮಹಿಳೆಯರಿಗೂ ಕೂಡ ಕೊಟ್ಟಿದ್ದು ಮತ್ತೊಂದು ವಿಶೇಷ ಎಂದ ಜಗದ್ಗುರುಗಳು ಹತ್ತು ದಿನಗಳ ಕಾಲ ನಡೆದ ಸಮಾರಂಭ ತಮಗೆ ಸಮಾಧಾನ ಸಂತೃಪ್ತಿ ತಂದಿವೆ ಎಂದು ಹರುಷ ವ್ಯಕ್ತಪಡಿಸಿದರು.
. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಶಾಸಕ ಜಗದೀಶ ಗುಡಗುಂಟಿ ಹಾಗೂ ಗಣ್ಯರು ಇದ್ದರು.























