Home ಜಿಲ್ಲೆ ಮಂಗಳೂರು ಪುತ್ತೂರಿಗೆ ಐಜಿಪಿ ಭೇಟಿ- ಬಲವಂತದ ಬಂದ್ ನಡೆದಿಲ್ಲ- ಎಸ್ಪಿ

ಪುತ್ತೂರಿಗೆ ಐಜಿಪಿ ಭೇಟಿ- ಬಲವಂತದ ಬಂದ್ ನಡೆದಿಲ್ಲ- ಎಸ್ಪಿ

ಪುತ್ತೂರು: ಈದ್‌ಮಿಲಾದ್ ಹಬ್ಬದ ಹಿನ್ನಲೆ ಮತ್ತು ಹಿಂದೂ ಜಾಗರಣಾ ವೇದಿಕೆ ನೀಡಿರುವ ಸ್ವಯಂಪ್ರೇರಿತ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಮಂಗಳವಾರ ಪಶ್ಚಿಮವಲಯ ಮಹಾ ಪೊಲೀಸ್ ನಿರೀಕ್ಷಕ (ಐಜಿಪಿ) ಅಮಿತ್ ಸಿಂಗ್ ಅವರು ಪುತ್ತೂರಿಗೆ ಭೇಟಿ ನೀಡಿದರು.
ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಪುತ್ತೂರಿನ ದರ್ಬೆಯ ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ ಐಜಿಪಿ ಅಮಿತ್ ಸಿಂಗ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಮತ್ತು ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ ಅವರಿಂದ ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪರಿಸ್ಥಿತಿ ಮತ್ತು ಕೈಗೊಂಡಿರುವ ಭದ್ರತಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿದರು
ಬಲವಂತದ ಬಂದ್ ನಡೆದಿಲ್ಲ- ಎಸ್ಪಿ
ಪುತ್ತೂರು; ದರ್ಭೆ ಘಟನೆಗೆ ಸಂಬಂಧಿಸಿ ಸಮರ್ಪಕವಾದ ತನಿಖೆ ನಡೆಸಿಯೇ ಕಾನೂನುಕ್ರಮ ಕೈಗೊಳ್ಳಲಾಗುವುದು. ನಾವು ಎಲ್ಲರನ್ನೂ ಸಮಾನವಾಗಿ ಕಂಡಿದ್ದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಆರೋಪಕ್ಕೆ ಸಂಬಂಧಿಸಿದ ಸೆಕ್ಷನ್ ಗಳಿಗೆ ಅನುಗುಣವಾಗಿ ನೋಟೀಸು ನೀಡುವುದು ಅಥವಾ ಬಂಧನ ಪ್ರಕ್ರಿಯೆ ನಡೆಯುತ್ತದೆ. ಹಿಂದಿನ ಪ್ರಕರಣಗಳಲ್ಲಿಯೂ ಅದೇ ರೀತಿ ಕ್ರಮ ಅನುಸರಿಸಿದ್ದೇವೆ ಎಂದು ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದರು.
ಪುತ್ತೂರಿನ ಡಿವೈಎಸ್ಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿ, ಪುತ್ತೂರಿಗೆ ಭೇಟಿ ನೀಡಿ ಬಂದೋಬಸ್ತು ಪರಿಶೀಲನೆ ಮಾಡಿದ್ದೇನೆ. ಕೆಲವರು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು, ಎಲ್ಲೂ ಬಲವಂತದ ಬಂದ್ ಕಂಡುಬಂದಿಲ್ಲ. ರಜಾ ದಿನಗಳಲ್ಲಿ ಕಂಡುಬರುವ ರೀತಿಯಲ್ಲಿ ಬಂದ್ ವಾತಾವರಣ ಕಂಡುಬಂದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಈದ್ ಮಿಲಾದ್ ಹಬ್ಬದ ಪ್ರಾರ್ಥನೆ ಹಾಗೂ ಮೆರವಣಿಗೆಗಳು ಯಶಸ್ವಿಯಾಗಿ ನಡೆದಿದೆ ಎಂದು ಅವರು ತಿಳಿಸಿದರು.