
ಸಂಜೆವಾಣಿ ವಾರ್ತೆ
ಹನೂರು.ನ.4:- ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಧರ್ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದು, ಅವರನ್ನು ಕೂಡಲೇ ಅಮಾನತ್ತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹನೂರು ತಾಲೂಕು ಸಮಿತಿ ಆಗ್ರಹಿಸಿದೆ.
ಈ ಕುರಿತು ಹನೂರು ತಹಸೀಲ್ದಾರ್ ರವರ ಮೂಲಕ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಸಂಘಟನೆಯ ಪದಾಧಿಕಾರಿಗಳು, ಶ್ರೀಧರ್ ಸಾರ್ವಜನಿಕರು ಮತ್ತು ರೈತರಿಗೆ ಧಮ್ಕಿ ಹಾಕುವುದು, ಮಹಿಳಾ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ, ಅಸಭ್ಯ ವರ್ತನೆ ತೋರುತ್ತಿರುವುದರಿಂದ ಮಹಿಳಾ ಸಿಬ್ಬಂದಿಗಳು ಕರ್ತವ್ಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ದೂರಿದ್ದಾರೆ.
ಈಗಾಗಲೇ ಮಹಿಳಾ ಸಿಬ್ಬಂದಿಗಳು ತಹಸೀಲ್ದಾರ್ ರವರಿಗೆ ದೂರು ಸಲ್ಲಿಸಿದ್ದಾರೆ. ಆದರೂ ಯಾವುದೇ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಪತ್ರಿಕಾಗೋಷ್ಠಿ ನಡೆಸಿ ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳ ವಿರುದ್ಧವೇ ಜಾತಿ ನಿಂದನೆ ಮಾಡಿದ್ದಾರೆ. ಈ ಹಿಂದೆ ಸಹಾ ಕೊಳ್ಳೇಗಾಲ ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವಾಗಲೂ ಇದೇ ರೀತಿ ದರ್ಪದಿಂದ ವರ್ತಿಸಿದ್ದ ಕಾರಣ ಅಲ್ಲಿನ ಸಂಘ ಸಂಸ್ಥೆಗಳು ಹೋರಾಟ ಮಾಡಿ ಅವರನ್ನು ಹನೂರಿಗೆ ವರ್ಗಾವಣೆ ಮಾಡಲಾಗಿತ್ತು, ಇಲ್ಲಿಯೂ ಅದೇ ಚಾಳಿ ಮುಂದುವರಿಸಿದ್ದಾರೆ.
ಇಂತಹ ಸೌಕರ ಸಮಾಜಕ್ಕೆ ಮತ್ತು ಕಛೇರಿಗೆ ಕಂಟಕವಾಗಿದ್ದು, ಅವರನ್ನು ತಕ್ಷಣ ಅಮಾನತ್ತು ಮಾಡಿ ಇಲಾಖಾ ತನಿಖೆ ನಡೆಸಿ ತಪ್ಪು ಸಾಬೀತಾದರೆ ಸರ್ಕಾರಿ ಸೇವೆಯಿಂದಲೇ ವಜಾಗೊಳಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎನ್.ಗೌಡೇಗೌಡ, ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಗೌಡ, ಜಿ.ಸಂ ಕಾರ್ಯದರ್ಶಿ ಅಮ್ಜದ್ ಖಾನ್, ತಾ.ಅಧ್ಯಕ್ಷ ರಾಜೇಂದ್ರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರಾಜಮಣಿ, ತಾ.ಅಧ್ಯಕ್ಷ ಮುತ್ತುಲಕ್ಷ್ಮಿ, ಜಿ.ಖಾ ಆಹ್ವಾನಿತ ನಾಗರಾಜು, ತಾ.ಉಪಾಧ್ಯಕ್ಷರಾದ ಕಾಶಿಗೌಡ, ರವಿ, ತಾಲೂಕು ಪ್ರ.ಕಾರ್ಯದರ್ಶಿ ವೆಂಕಟಾಚಲ ಸೇರಿದಂತೆ ಇನ್ನಿತರರು ಇದ್ದರು.























