Home ಜಿಲ್ಲೆ ಮೈಸೂರು ಜು.29ರಂದು ಅರ್ಥಪೂರ್ಣವಾಗಿ ಹಡಪದ ಅಪ್ಪಣ್ಣ ಜಯಂತಿ

ಜು.29ರಂದು ಅರ್ಥಪೂರ್ಣವಾಗಿ ಹಡಪದ ಅಪ್ಪಣ್ಣ ಜಯಂತಿ

ಸಂಜೆವಾಣಿ ವಾರ್ತೆ
ಮೈಸೂರು: ಜು.22:-
ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಜುಲೈ 29 ರಂದು ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರುವುದು, ಅವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಜಯಂತಿ ಆಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.

ಹಡಪದ ಅಪ್ಪಣ್ಣ ಅವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಅವರ ಆದರ್ಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಾಗೂ ಮುಂದಿನ ಪೀಳಿಗೆಗೆ ಅವರ ತತ್ವಗಳನ್ನು ತಲುಪಿಸಲು ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

ಹಡಪದ ಅಪ್ಪಣ್ಣ ಜಯಂತಿಯನ್ನು ಜುಲೈ 29 ರಂದು ಬೆಳಗ್ಗೆ 11.30 ಗಂಟೆಗೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಚರಣೆ ಮಾಡಲಾಗುವುದು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗೀತಾ ಗಾಯನ ಏರ್ಪಡಿಸಲಾಗುವುದು. ಸಮುದಾಯದ ಮುಖಂಡರ ಸಲಹೆಯಂತೆ ದಿವ್ಯ ಸಾನಿಧ್ಯ ಹಾಗೂ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯನ್ನು ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಬಾರದು. ಎಲ್ಲಾ ಸಮುದಾಯದವರು ಸೇರಿ ಜಯಂತಿಗಳನ್ನು ಆಚರಿಸಬೇಕು. ಜಯಂತಿಗಳ ಆಚರಣೆಯ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವುದಾಗಿದೆ. ಮಹನೀಯರ ತತ್ವ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೇದಿಕೆಯ ಮೇಲೆ ಗಣ್ಯರಿಗೆ ಬೊಕ್ಕೆಗಳನ್ನು ನೀಡಿ ಸ್ವಾಗತಿಸುವ ಬದಲು ಆಯಾ ಜಯಂತಿಗಳಲ್ಲಿ ಆ ಮಹನೀಯರ ಜೀವನ ಚರಿತ್ರೆ ಕುರಿತ ಪುಸ್ತಕಗಳನ್ನು ನೀಡಿ ಸ್ವಾಗತಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಯಂತಿ ನಡೆಯುವ ಸ್ಥಳದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ ಹಾಗೂ ಶಾಮಿಯಾನ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಮಾಡಬೇಕು. ವಿವಿಧ ಜಯಂತಿಗಳ ಆಚರಣೆ ಸಂದರ್ಭದಲ್ಲಿ ಮೈಸೂರು ನಗರದಲ್ಲಿರುವ ಎಲ್ಲಾ ಮಹನೀಯರ ಪ್ರತಿಮೆಗಳನ್ನು ಮಹಾನಗರ ಪಾಲಿಕೆಯ ವತಿಯಿಂದ ಸ್ವಚ್ಛಗೊಳಿಸಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಡಿ.ಎಂ. ಸುದರ್ಶನ್ ಮಾತನಾಡಿ, ಜಯಂತಿಗಳ ಆಚರಣೆಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳಿಗೆ ಹಾಗೂ ಮುಖಂಡರಿಗೆ ಆಹ್ವಾನ ನೀಡಲಾಗುವುದು. ಕಲಾಮಂದಿರದ ಕಿರುರಂಗಮಂದಿರದಲ್ಲಿ ಗೀತಾ ಗಾಯನ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸಮುದಾಯದ ಮುಖಂಡರು ಮಾತನಾಡಿ, ಜಯಂತಿಯ ದಿವ್ಯ ಸಾನಿಧ್ಯಕ್ಕೆ ತಮ್ಮ ಸಮುದಾಯದ ಸ್ವಾಮೀಜಿಗಳ ಹೆಸರನ್ನು ಆಯ್ಕೆ ಮಾಡಿ ಒಂದೆರಡು ದಿನಗಳಲ್ಲಿ ನೀಡಲಾಗುವುದು. ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳ ಹೆಸರನ್ನು ಕೂಡ ನೀಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಹಡಪದ ಅಪ್ಪಣ್ಣ ಸಮುದಾಯದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.