
ಶಿವಮೊಗ್ಗ : ಆ.25- ಜಿಲ್ಲೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIಖ) ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಇಂದು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಸ್ಥಳೀಯ ಬಿಎಲ್ಒ ಕಚೇರಿಗಳಲ್ಲಿ ಅಥವಾ ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲೆಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು. ಪ್ರಸ್ತುತ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 48,668 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಈವರೆಗೆ ಮ್ಯಾಪಿಂಗ್ ಆಗದಿರುವ 15,164ಮತದಾರರಿಗೆ ಹಾಗೂ ತಂದೆ-ಮಗನ ವಯಸ್ಸಿನ ಗಣನೀಯ ಅಂತರ ಸೇರಿದಂತೆ ದೋಷಪೂರಿತ ಮಾಹಿತಿ ಇರುವ (ಅನೋಮಲಿಸ್) 33,504 ಮತದಾರರು ಸೇರಿದಂತೆ ಒಟ್ಟು 48,668 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಈ ಎಲ್ಲರೂ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗುವುದು. ಮ್ಯಾಪಿಂಗ್ ಮಾಡಲು ಅವರಿಗೆ ಕಾಲಾವಕಾಶ ನಿಗಧಿಪಡಿಸಿಕೊಡಲಾಗುವುದು. ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶವಿದ್ದು, ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಲಿದೆ ಎಂದರು.
ದಿ.16.06.2026ರ ಮತಪಟ್ಟಿಯಲ್ಲಿದ್ದಂತೆ ಜಿಲ್ಲೆಯಲ್ಲಿ 15,19,459ಮತದಾರರಿದ್ದು, ಅವರಲ್ಲಿ 13,30,905ಮತದಾರರ ಹೆಸರನ್ನು ಅಧಿಕೃತಗೊಳಿಸಿ, ಗಣಕೀಕರಣ ಕಾರ್ಯ ಪೂರ್ಣಗೊಳಿಸಲಾಗಿದೆ. ಅಂದರೆ ಶೇ.87.59ರಷ್ಟು ಪರಿಷ್ಕರಣೆ ಕಾರ್ಯ ಪೂರ್ಣಗೊಂಡಂತಾಗಿದೆ. ಎಸ್ಐಆರ್ ಪ್ರಕ್ರಿಯೆ ವೇಳೆ 1,88,554 ಮತದಾರರನ್ನು `ಎಎಸ್ಡಿಡಿಒ’ ವರ್ಗಕ್ಕೆ ಸೇರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ಈ ಪೈಕಿ 46683ಮತದಾರರ ಮೃತರಾಗಿರುವುದನ್ನು, 23165ಮತದಾರರ ಗೈರಾಗಿರುವುದನ್ನು ಹಾಗೂ 99225ಮತದಾರರು ಸ್ಥಳಾಂತರಗೊಂಡಿರುವುದನ್ನು ಗುರುತಿಸಲಾಗಿದೆ ಎಂದರು.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರರ (ಎಎಸ್ಡಿಡಿಒ) ಪೈಕಿ ಗೈರು, ಸ್ಥಳಾಂತರಗೊಂಡಿರುವ, ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ತಿದ್ದುಪಡಿ ಇದ್ದರೆ, ಹೊಸ ಸೇರ್ಪಡೆಗೆ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಕೆ ಮಾಡಬೇಕು. ಇದರ ಜತೆಗೆ ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಹೆಸರು, ವಿಳಾಸ ಬದಲಾವಣೆಗೆ ನಮೂನೆ-8 ಬಳಸಿ ಅರ್ಜಿ ಹಾಕಬಹುದು. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಆ ಮತದಾರರ ಪಟ್ಟಿಯ ಪೌರತ್ವ ದೃಢಪಟ್ಟರಷ್ಟೇ, ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದವರು ನುಡಿದರು.
ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಕುರಿತು ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರಿಗೆ ಸಕಾಲಿಕ ಮಾಹಿತಿ ಒದಗಿಸಲಾಗಿದೆ. ಇಲ್ಲಿಯವರೆಗಿನ ಪರಿಷ್ಕರಣೆ ಕಾರ್ಯದ ಕುರಿತು ಸಾರ್ವಜನಿಕರಿಂದಾಗಲೀ ಅಥವಾ ರಾಜಕೀಯ ಪಕ್ಷಗಳ ಮುಖಂಡರಿಂದಾಗಲೀ ಯಾವುದೇ ಆಕ್ಷೇಪಣೆಗಳು ಬಂದಿರುವುದಿಲ್ಲ ಎಂದ ಅವರು, ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಅಗತ್ಯಕ್ಕೆ ತಕ್ಕಂತೆ ಇ.ಆರ್.ಓ ಮತ್ತು ಎ.ಇ.ಆರ್.ಓ.ಗಳನ್ನು ನೇಮಿಸಲಾಗಿದೆ ಎಂದರು.

































