
ನವದೆಹಲಿ, ಜು. ೭- ಕಳೆದ ವರ್ಷದ ಏಪ್ರಿಲ್ (೨೦೨೫) ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಮಾಸ್ಟರ್ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್ ವಿರುದ್ಧ ರಾಷ್ಟ್ರೀಯ ತನಿಖಾ ದಳ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಕುಟುಂಬಸ್ಥರ ಕಣ್ಣೆದುರೇ ೨೫ ಪ್ರವಾಸಿಗರನ್ನು ಮತ್ತು ಓರ್ವ ಸ್ಥಳೀಯ ನಿವಾಸಿಯನ್ನು ಪಾಕಿಸ್ತಾನಿ ಮೂಲದ ಮೂವರು ಉಗ್ರರು ಮನಬಂದಂತೆ ಗುಂಡಿಕ್ಕಿ ಕೊಂದಿದ್ದ ಈ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಪ್ರಕರಣದ ಆಳವಾದ ತನಿಖೆ ನಡೆಸಿರುವ ಎನ್ಐಎ, ದಾಳಿಯ ಹಿಂದೆ ಹಫೀಜ್ ಸಯೀದ್ನ ನೇರ ಪಾತ್ರವಿರುವುದನ್ನು ಸಾಕ್ಷ್ಯಧಾರ ಸಮೇತ ಕೋರ್ಟ್ಗೆ ಮಂಡಿಸಿದೆ.
ಡಿಜಿಟಲ್ ಹೆಜ್ಜೆಗುರುತುಗಳ ಪತ್ತೆ:
ವೈಜ್ಞಾನಿಕ ತನಿಖೆ ಮತ್ತು ಭೂಮಿ ಪರಿಶೀಲನೆಯ ಆಧಾರದ ಮೇಲೆ ಎನ್ಐಎ ಎರಡನೇ ಚಾರ್ಜ್ಶೀಟ್ ಸಿದ್ಧಪಡಿಸಿದ್ದು, ಅದರಲ್ಲಿ ಹಫೀಜ್ ಸಯೀದ್ನ ಸಂಚಿನ ಸಂಪೂರ್ಣ ವಿವರಗಳಿವೆ. ಉಗ್ರರ ಮೊಬೈಲ್ ಡೇಟಾ, ಚಾಟ್ಗಳು ಹಾಗೂ ಜಿಪಿಎಸ್ ಲಾಗ್ಗಳನ್ನು ಪರಿಶೀಲಿಸಿದಾಗ ಎಲ್ಇಟಿ ಉನ್ನತ ನಾಯಕರ ಸಂಪರ್ಕ ಮತ್ತು ಈ ಭೀಕರ ಕೃತ್ಯದ ಯೋಜನೆಯ ಡಿಜಿಟಲ್ ಹೆಜ್ಜೆಗುರುತುಗಳು ಲಭ್ಯವಾಗಿವೆ ಎಂದು ಎನ್ಐಎ ತಿಳಿಸಿದೆ.
ಭಾರತದ ವಿರುದ್ಧ ಯುದ್ಧ ಘೋಷಣೆ:
ಹಫೀಜ್ ಸಯೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)-೨೦೨೩ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತದ ವಿರುದ್ಧ ಯುದ್ಧ ಸಾರಿದ ಹಾಗೂ ಗಡಿಯಾಚೆಯಿಂದಲೇ ಕ್ರಿಮಿನಲ್ ಪಿತೂರಿ ನಡೆಸಿದ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ಅಪರಾಧಿಯ ಅನುಪಸ್ಥಿತಿಯಲ್ಲೇ ವಿಚಾರಣೆ:
ಹೊಸದಾಗಿ ಜಾರಿಗೆ ಬಂದಿರುವ ’ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಅನ್ವಯ, ಆರೋಪಿ ಹಫೀಜ್ ಸಯೀದ್ ನ್ಯಾಯಾಲಯಕ್ಕೆ ಹಾಜರಾಗದಿದ್ದರೂ ಆತನ ಅನುಪಸ್ಥಿತಿಯಲ್ಲೇ ಕಾನೂನು ವಿಚಾರಣೆ ಮುಂದುವರಿಯಲಿದ್ದು, ನ್ಯಾಯಾಲಯವು ತೀರ್ಪು ಪ್ರಕಟಿಸಲು ಇದು ನೆರವಾಗಲಿದೆ.
ಪಾಕ್ ಐಎಸ್ಐ ನಿರ್ದೇಶನ
ಮೂಲಗಳ ಪ್ರಕಾರ, ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಅಲ್ಲಿನ ಪ್ರಮುಖ ರಾಜತಾಂತ್ರಿಕರ ಸೂಚನೆಯ ಮೇರೆಗೆ ಹಫೀಜ್ ಸಯೀದ್ ತನ್ನ ಆಪ್ತ ಉಗ್ರ ಸಜೀದ್ ಜಟ್ಗೆ ಪ್ರವಾಸಿಗರು ಅಥವಾ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಪಹಲ್ಗಾಮ್ನಲ್ಲಿ ದೊಡ್ಡ ದಾಳಿ ನಡೆಸಲು ಆದೇಶಿಸಿದ್ದ ಎನ್ನಲಾಗಿದೆ. ದಾಳಿಯ ರಹಸ್ಯ ಸೋರಿಕೆಯಾಗದಂತೆ ತಡೆಯಲು ಮತ್ತು ಗರಿಷ್ಠ ಸಾವು-ನೋವು ಉಂಟುಮಾಡುವ ಉದ್ದೇಶದಿಂದ ಸ್ಥಳೀಯ ಕಾಶ್ಮೀರಿಗಳನ್ನು ಬಳಸಿಕೊಳ್ಳದೆ, ಕೇವಲ ಪಾಕಿಸ್ತಾನಿ ಉಗ್ರರನ್ನೇ ಕೃತ್ಯಕ್ಕೆ ನಿಯೋಜಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ.





























