Home ಸುದ್ದಿ ರಾಷ್ಟ್ರೀಯ ಅಮೆರಿಕ-ಇರಾನ್ ಒಪ್ಪಂದ: ಭಾರತ ಸ್ವಾಗತ

ಅಮೆರಿಕ-ಇರಾನ್ ಒಪ್ಪಂದ: ಭಾರತ ಸ್ವಾಗತ

ದೆಹಲಿ.ಜೂ.23: ಮುಂಬರುವ ದಿನಗಳಲ್ಲಿ ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಜಾಗತಿಕ ವ್ಯಾಪಾರ ವಲಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಲ್ಲ ಅಮೆರಿಕ ಮತ್ತು ಇರಾನ್ ನಡುವಿನ ಮಹತ್ವದ ಒಪ್ಪಂದವನ್ನು ಭಾರತ ಮುಕ್ತಕಂಠದಿಂದ ಸ್ವಾಗತಿಸಿದೆ.


ಸ್ವಿಟ್ಜರ್ಲೆಂಡ್‍ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ಉಭಯ ದೇಶಗಳು ತಲುಪಿರುವ ಈ ಒಮ್ಮತದ ಕುರಿತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ‘ಎಚ್ಚರಿಕೆಯ ಆಶಾವಾದ’ ವ್ಯಕ್ತಪಡಿಸಿದ್ದಾರೆ. ರಾಜಧಾನಿ ಹೊಸದೆಹಲಿಯಲ್ಲಿ ಮಂಗಳವಾರ ನಡೆದ 16ನೇ ಬ್ರಿಕ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಈ ಪ್ರಮುಖ ಬೆಳವಣಿಗೆಯು ಜಾಗತಿಕ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಮತ್ತು ಪೂರೈಕೆ ವ್ಯವಸ್ಥೆಯಲ್ಲಾಗುತ್ತಿದ್ದ ಅಡಚಣೆಗಳನ್ನು ನಿವಾರಿಸಲು ನೆರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.


ಇಂಧನ ಭದ್ರತೆಗೆ ಆನೆಬಲ”ಅಮೆರಿಕ ಹಾಗೂ ಇರಾನ್ ನಡುವೆ ಏರ್ಪಟ್ಟಿರುವ ಒಪ್ಪಂದವನ್ನು ಭಾರತ ಸ್ವಾಗತಿಸುತ್ತದೆ. ಈ ಬೆಳವಣಿಗೆಯನ್ನು ನಾವು ಎಚ್ಚರಿಕೆಯ ಆಶಾವಾದದೊಂದಿಗೆ ಗಮನಿಸುತ್ತಿದ್ದು, ಇದು ಯಶಸ್ವಿಯಾಗಲಿದೆ ಎಂಬ ನಂಬಿಕೆ ನಮಗಿದೆ. ಪ್ರಮುಖವಾಗಿ ಈ ಒಪ್ಪಂದದಿಂದ ಜಾಗತಿಕ ಇಂಧನ ಭದ್ರತೆಗೆ ದೊಡ್ಡ ಮಟ್ಟದ ಬಲ ಸಿಗಲಿದೆ” ಎಂದು ಅಜಿತ್ ದೋವಲ್ ಸಭೆಯಲ್ಲಿ ತಿಳಿಸಿದರು.


ಹೊರ್ಮುಜ್ ಜಲಸಂಧಿ ಮುಕ್ತ: ಆರ್ಥಿಕತೆಗೆ ಚೇತರಿಕೆಆಯಕಟ್ಟಿನ ಜಾಗತಿಕ ಸಮುದ್ರ ಮಾರ್ಗಗಳ ಮಹತ್ವವನ್ನು ಒತ್ತಿಹೇಳಿದ ದೋವಲ್, ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾಗಿರುವ ‘ಹೊರ್ಮುಜ್ ಜಲಸಂಧಿ’ ಮುಕ್ತ ಸಂಚಾರಕ್ಕೆ ಲಭ್ಯವಾಗುತ್ತಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ ಎಂದರು. “ಹೊರ್ಮುಜ್ ಜಲಸಂಧಿಯ ಮುಕ್ತ ಕಾರ್ಯಾಚರಣೆಯಿಂದಾಗಿ ಅಂತಾರಾಷ್ಟ್ರೀಯ ಪೂರೈಕೆ ಜಾಲದಲ್ಲಿದ್ದ ದೊಡ್ಡ ಬಿಕ್ಕಟ್ಟುಗಳು ನಿವಾರಣೆಯಾಗಲಿವೆ. ಜಾಗತಿಕವಾಗಿ ತಲೆದೋರಿದ್ದ ರಾಸಾಯನಿಕ ಮತ್ತು ರಸಗೊಬ್ಬರಗಳ ಕೊರತೆಯನ್ನು ನೀಗಿಸಲು ಇದು ನೆರವಾಗಲಿದೆ. ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ಸಿಗುವುದರಿಂದ ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕ ಪ್ರಗತಿ ವೇಗ ಪಡೆದುಕೊಳ್ಳಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ಬಹುಪಕ್ಷೀಯತೆಯ ಕುಸಿತದ ಬಗ್ಗೆ ಕಳವಳಪ್ರಸ್ತುತ ಜಾಗತಿಕ ಭದ್ರತಾ ಸವಾಲುಗಳ ಕುರಿತು ಮಾತನಾಡಿದ ಎನ್‍ಎಸ್‍ಎ ದೋವಲ್, “ನಾವು ಅತ್ಯಂತ ಕಠಿಣ ಹಾಗೂ ಸವಾಲಿನ ಸಂದರ್ಭದಲ್ಲಿ ಭೇಟಿಯಾಗುತ್ತಿದ್ದೇವೆ. ಇಂದು ಇಡೀ ಜಗತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ಆರ್ಥಿಕ ಬಿಕ್ಕಟ್ಟು ಹಾಗೂ ತಂತ್ರಜ್ಞಾನದ ದುರುಪಯೋಗದಂತಹ ಜಟಿಲ ಸಮಸ್ಯೆಗಳಿಂದ ಬಳಲುತ್ತಿದೆ. ದುರದೃಷ್ಟವಶಾತ್, ಇಂತಹ ಸಂಘರ್ಷಗಳನ್ನು ತಡೆಯಬೇಕಾದ ಜಾಗತಿಕ ಸಾಂಸ್ಥಿಕ ವ್ಯವಸ್ಥೆಗಳು ವಿಫಲವಾಗುತ್ತಿದ್ದು, ಜಗತ್ತಿನಲ್ಲಿ ಬಹುಪಕ್ಷೀಯತೆ ಕ್ಷೀಣಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.


ಬ್ರಿಕ್ಸ್ ಒಕ್ಕೂಟದ ಪಾತ್ರ ಶ್ಲಾಘನೀಯವಿಕಸನಗೊಳ್ಳುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ‘ಬ್ರಿಕ್ಸ್’ ಒಕ್ಕೂಟದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಅವರು, “ಜಾಗತಿಕ ಆಡಳಿತದಲ್ಲಿ ಸುಧಾರಣೆ ತರಲು ಮತ್ತು ‘ಗ್ಲೋಬಲ್ ಸೌತ್’ (ಅಭಿವೃದ್ಧಿಶೀಲ ರಾಷ್ಟ್ರಗಳ) ಧ್ವನಿಯನ್ನು ಬಲಪಡಿಸಲು ಬ್ರಿಕ್ಸ್ ಉತ್ತಮ ವೇದಿಕೆಯಾಗಿದೆ. ಶಾಂತಿ, ಪ್ರಗತಿ ಹಾಗೂ ಪರಸ್ಪರ ಸಹಕಾರವನ್ನು ನಂಬುವ ದೇಶಗಳ ಈ ಒಕ್ಕೂಟವು ದಿನದಿಂದ ದಿನಕ್ಕೆ ಶಕ್ತಿಶಾಲಿಯಾಗುತ್ತಿರುವುದು ಹೆಮ್ಮೆಯ ವಿಷಯ” ಎಂದು ಹೇಳಿದರು.