
ನವದೆಹಲಿ, ಜು. ೧೮:ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ೨೧ ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಖ್ಯಾತ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ್ದು, ಇಂದು ಮುಂಜಾನೆ ಅವರನ್ನು ಪೊಲೀಸರು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶ ಹಾಗೂ ವೈದ್ಯರ ತುರ್ತು ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ತಡೆಯೊಡ್ಡಲು ಯತ್ನಿಸಿದಾಗ ಸಣ್ಣ ಮಟ್ಟದ ಗದ್ದಲ ಉಂಟಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜಂತರ್ ಮಂತರ್‌ನಲ್ಲಿದ್ದ ಇತರೆ ಪ್ರತಿಭಟನಾಕಾರರನ್ನು ಅಲ್ಲಿಂದ ಬಲವಂತವಾಗಿ ತೆರವುಗೊಳಿಸಿದ್ದಾರೆ ಮತ್ತು ಶಾಂತಿಯುತವಾಗಿ ಜಾಗ ಖಾಲಿ ಮಾಡುವಂತೆ ಮನವಿ ಮಾಡಿದ್ದಾರೆ. ಪೊಲೀಸರು ತಡರಾತ್ರಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
“ಸುದೀರ್ಘ ಉಪವಾಸದಿಂದಾಗಿ ನನ್ನ ದೇಹದ ಶೇ. ೨೦ ರಷ್ಟು ತೂಕ ಕಡಿಮೆಯಾಗಿದೆ. ಈ ಸರ್ಕಾರ ಇನ್ನಾದರೂ ದೇಶದ ಯುವಕರ ಧ್ವನಿಗೆ ಕಿವಿಗೊಡಬೇಕು.” ಆಸ್ಪತ್ರೆಗೆ ದಾಖಲಾಗುವ ಮುನ್ನ ಸೋನಂ ವಾಂಗ್ಚುಕ್ ಬಿಡುಗಡೆ ಮಾಡಿದ್ದ ವಿಡಿಯೋ ಸಂದೇಶದಲ್ಲಿ ಒತ್ತಾಯಿಸಿದ್ದಾರೆ.
ಸುದೀರ್ಘ ಉಪವಾಸ ಮತ್ತು ನಿರ್ಜಲೀಕರಣದಿಂದಾಗಿ ವಾಂಗ್ಚುಕ್ ಅವರು ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಸಫ್ದರ್‌ಜಂಗ್ ಆಸ್ಪತ್ರೆಯ ವೈದ್ಯಕೀಯ ಮಂಡಳಿ ತಿಳಿಸಿದೆ.
ಕೇಂದ್ರ ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಸರ್ಕಾರ ವಿದ್ಯಾರ್ಥಿಗಳ ಪರ ನಿಲ್ಲದೆ ಕೇವಲ ವೀಕ್ಷಕನಂತೆ ವರ್ತಿಸುತ್ತಿದೆ ಎಂದು ಟೀಕಿಸಿದರೆ, ಆಪ್ ಮುಖಂಡ ಮನೀಶ್ ಸಿಸೋಡಿಯಾ ಅವರು “ಇದು ರಾಜಕೀಯವಲ್ಲ, ಸರ್ಕಾರದ ಹೇಡಿತನ” ಎಂದು ಆಕ್ರೋಶ ಹೊರಹಾಕಿದ್ದಾರೆ.
ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಘಟನೆಗಳು ಸ್ಪಷ್ಟಪಡಿಸಿವೆ. ಜುಲೈ ೨೦ ರಂದು ಸಂಸತ್ತಿಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾ ನಿರತ ಕಾಕ್ರೋಚ್ ಜನತಾ ಪಾರ್ಟಿ ಮುಖಂಡ ಅಭಿಜೀತ್ ದಿಪ್ಕೆ ಎಚ್ಚರಿಕೆ ನೀಡಿದ್ದಾರೆ.
’
ನನ್ನ ಅನುಮತಿ ಇಲ್ಲದೆ ಯಾವುದೇ ಚಿಕಿತ್ಸೆ ನೀಡಬೇಡಿ ಎಂದ ಪತ್ನಿ
ಲಡಾಖ್‌ನ ಪ್ರಮುಖ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ನಿರಶನ ಸತ್ಯಾಗ್ರಹ ಇಂದು ೨೧ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ, ದೆಹಲಿ ಪೊಲೀಸರು ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ, ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ತಮ್ಮ ಪತಿಯ ಆರೋಗ್ಯ ಸ್ಥಿತಿ ನಿನ್ನೆ ಚೆನ್ನಾಗಿಯೇ ಇತ್ತು ಎಂದು ತಿಳಿಸಿರುವ ಗೀತಾಂಜಲಿ, ಅವರನ್ನು ದಿಢೀರನೆ ಆಸ್ಪತ್ರೆಗೆ ದಾಖಲಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ’ಘಿ’ ನಲ್ಲಿ ಪೋಸ್ಟ್ ಮಾಡಿರುವ ಅವರು, “ನನ್ನ ಅಥವಾ ಅವರ ಆರೋಗ್ಯವನ್ನು ಕಳೆದ ೨೦ ದಿನಗಳಿಂದ ನಿರಂತರವಾಗಿ ಪರಿಶೀಲಿಸುತ್ತಿರುವ ವೈದ್ಯರ ತಂಡದ ಪೂರ್ವ ಅನುಮತಿ ಇಲ್ಲದೆ ಸೋನಮ್ ಅವರಿಗೆ ಯಾವುದೇ ರೀತಿಯ ಆಹಾರ, ಔಷಧಿ ಅಥವಾ ಐವಿ (Iಗಿ) ದ್ರವಗಳನ್ನು ನೀಡಬಾರದು” ಎಂದು ಕಡಾಖಂಡಿತವಾಗಿ ತಿಳಿಸಿದ್ದಾರೆ.































