
ಎಚ್‌ಡಿಡಿ ಭಾಗಿ
ಬೆಂಗಳೂರು, ಜು. ೧೮- ಬಿಡದಿ ಟೌನ್‌ಶಿಪ್ ವಿರೋಧಿಸಿ ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಪ್ರತ್ಯೇಕ ಪಾದಯಾತ್ರೆಗಳನ್ನು ನಡೆಸಲು ನಿರ್ಧರಿಸಿದ್ದು, ಜೆಡಿಎಸ್ ಈ ತಿಂಗಳ ೩೦ ರಿಂದ ಬಿಡದಿಯ ಬೈರಮಂಗಲದಿಂದ ಬೆಂಗಳೂರಿನವರೆಗೂ ಮೂರು ದಿನಗಳ ಕಾಲ ಪಾದಯಾತ್ರೆ ನಡೆಸಲಿದೆ.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಪ್ರತ್ಯೇಕ ಹೋರಾಟ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಯನ್ನು ಪ್ರತ್ಯೇಕವಾಗಿಯೇ ನಡೆಸುತ್ತಿದ್ದು, ಬಿಜೆಪಿ ಪಾದಯಾತ್ರೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಈ ನಡುವೆಯೇ ಜೆಡಿಎಸ್ ಈ ತಿಂಗಳ ೩೦ ರಿಂದ ಪಾದಯಾತ್ರೆ ನಡೆಸುವುದಾಗಿ ಘೋಷಣೆ ಮಾಡಿದೆ.
ಬಿಜೆಪಿ ಬೆಂಗಳೂರಿನಿಂದ ಬಿಡದಿವರೆಗೂ ಪಾದಯಾತ್ರೆ ನಡೆಸಲು ಯೋಚಿಸಿದ್ದರೇ, ಜೆಡಿಎಸ್ ಬಿಡದಿಯಿಂದ ಬೆಂಗಳೂರಿವವರೆಗೂ ಪಾದಯಾತ್ರೆಗೆ ಮುಂದಾಗಿದೆ.
ಜೆಡಿಎಸ್ ಕಾರ್ಯಾಲಯದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಅವರು, ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿ, ಪಾದಯಾತ್ರೆಯ ಪೋಸ್ಟರ್ ಬಿಡುಗಡೆ ಮಾಡಿದರು.
ಬಿಡದಿ ಟೌನ್‌ಶಿಪ್ ವಿರೋಧಿಸಿ ಈ ಹಿಂದೆ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಿಡದಿಯಲ್ಲಿ ೧೧ ಕಿ.ಮೀ. ಪಾದಯಾತ್ರೆ ಮಾಡಿದ್ದರು. ಈಗ ಜೆಡಿಎಸ್ ಮತ್ತೆ ಬಿಡದಿಯಿಂದ ಬೆಂಗಳೂರಿನವರೆಗೂ ವಿಧಾನಸೌಧ ಚಲೋ ಪಾದಯಾತ್ರೆಯನ್ನು ಜು. ೩೦ ರಿಂದ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.
ಜುಲೈ ೩೦ ರಿಂದ ಆಗಸ್ಟ್ ೧ ರವರೆಗೂ ಮೂರು ದಿನ ಈ ಪಾದಯಾತ್ರೆ ನಡೆಯಲಿದ್ದು, ಜು. ೩೧ ರಿಂದ ಬಿಡದಿಯ ಬೈರಮಂಗಲದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡುವರು ಎಂದು ಅವರು ಹೇಳಿದರು
ಜು. ೩೧ ರಂದು ಪಾದಯಾತ್ರೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭಾಗಿಯಾಗಿ ರೈತರಿಗೆ ಧೈರ್ಯ ತುಂಬಲಿದ್ದಾರೆ ಎಂದು ಅವರು ತಿಳಿಸಿದರು
ಪಾದಯಾತ್ರೆಯ ಮೂರನೇ ದಿನವಾದ ಆಗಸ್ಟ್ ೧ ರಂದು ಸಾವಿರಾರು ರೈತರೊಂದಿಗೆ ಪಾದಯಾತ್ರೆ ಪ್ರೀಡಂ ಪಾರ್ಕ್ ತಲುಪಲಿದ್ದು, ಅಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಅವರು ಹೇಳಿದರು.
ಜೆಡಿಎಸ್‌ನ ಈ ಪಾದಯಾತ್ರೆಯಲ್ಲಿ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಸಂಸದರು, ಮಾಜಿ ಸಚಿವರು, ಶಾಸಕರು ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ. ಸುರೇಶ್‌ಬಾಬು, ಶಾಸಕ ಎ. ಮಂಜು, ಮುಖಂಡರುಗಳಾದ ಜವರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.































