
ವಿಜಯಪುರ: ಮೇ.4:ಕಾವ್ಯಕ್ಕೆ ಸಂಗೀತ ಮತ್ತು ದೃಶ್ಯದ ಸ್ಪರ್ಶ ನೀಡಿದರೆ ಜನಮನ ತಲುಪುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ ಬರಗೂರು ಹೇಳಿದರು.
ಅವರು ನಗರದ ಗಾನಬನದ ಶ್ರೀಗುರು ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಹಾಗೂ ಸಿದ್ಧರಾಮೇಶ್ವರ ಟೆಲಿಫಿಲಂ ಆಶ್ರಯದಲ್ಲಿ ಹಮ್ಮಿಕೊಂಡ ಸೋಮು ಹಿಪ್ಪರಗಿ ಅವರ ‘ವಿಜಯಪುರ’ ಕನ್ನಡ ಅಲ್ಬಮ್ ಸಾಂಗ್ ಲೋಕಾರ್ಪಣೆ ಹಾಗೂ ವರ್ತಮಾನ ಕಾವ್ಯ ಸಿಂಚನ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯದ ಓದು ವ್ಯಕ್ತಿಯ ಚಿಂತನೆಯ ಹರಿವನ್ನು ಹೆಚ್ಚಿಸುವುದರ ಜೊತೆಗೆ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದಿವ್ಯ ಶಕ್ತಿಯಾಗಿದೆ. ಕವಿತೆ ಗಟ್ಟಿಗೊಳ್ಳಲು ಅಧ್ಯಯನ ಅಗತ್ಯವಾಗಿದೆ. ಕವಿ ಸೋಮು ಅವರ ವಿಜಯಪುರ ಸಾಂಸ್ಕøತಿಕ ಪರಂಪರೆ ಸಾರುವ ಸಾಹಿತ್ಯವನ್ನು ದೃಶ್ಯಗಳಲ್ಲಿ ಸೆರೆ ಹಿಡಿದಿರುವ ನಿರ್ದೇಶಕ ಸುನೀಲಕುಮಾರ ಸುಧಾಕರ ಅವರ ಕ್ರಿಯಾಶೀಲತೆಗೆ ವಿಜಯಪುರ ಅಲ್ಬಮ್ ಸಾಂಗ್ ಹಿಡಿದ ಕೈಗನ್ನಡಿಯಾಗಿದೆ ಆ ಮೂಲಕ ವಿಜಯಪುರ ಕರ್ನಾಟಕದ ಸಾಂಸ್ಕøತಿಕ ನಗರವಾಗಿದೆ ಎಂದರು.
ಅಲ್ಬಮ್ ಸಾಂಗ ಬಿಡುಗಡೆಗೊಳಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ದಾಕ್ಷಾಯಣಿ ಹುಡೇದ ಮಾತನಾಡಿ, ಇತಿಹಾಸ ಎಲ್ಲರನ್ನು ಕರೆದುಕೊಂಡು ಹೋಗುವ ಸಂದೇಶಗಳನ್ನು ಹೇಳುತ್ತದೆ. ಸಾಮರಸ್ಯದ ನೆಲೆಗಳನ್ನು ಹುಡುಕುತ್ತಾ ಹೋಗುವ ಸಂದರ್ಭದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೆಸೆಯುವ ಅಲ್ಬಮ್ ಸಾಂಗ್ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾದುದು ಎಂದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಸಂಶೋಧಕ ಲಾಯಪ್ಪ ಇಂಗಳೆ ಮಾತನಾಡಿ, ವಿಜಯಪುರದಲ್ಲಿ ಎರಡು ಗುಮ್ಮಟಗಳಿವೆ. ಒಂದು ಭೌತಿಕ ಗೋಳ ಗುಮ್ಮಟ ಇನ್ನೊಂದು ಬೌದ್ಧಿಕ ವಚನ ಗುಮ್ಮಟ, ಭೌತಿಕ ಗುಮ್ಮಟವು ಪ್ರವಾಸಿಗರನ್ನು ತನ್ನತ್ತ ಸೆಳೆದರೆ, ಬೌದ್ಧಿಗ ವಚನ ಗುಮ್ಮಟವು ನಿರಂತರವಾಗಿ ಶರಣರ ಸಂದೇಶಗಳ ಮೂಲಕ ಎಲ್ಲರನ್ನು ಎಚ್ಚರಿಸುತ್ತಿವೆ. ವಿಶ್ವಗುರು ಬಸವಣ್ಣನವರ ವಚನ ಸಂದೇಶಗಳನ್ನು ಮಾನವ ಕುಲಕ್ಕೆ ದಾರಿದೀಪವಾಗಿವೆ. ಜನ ಬಯಸುವ ರೀತಿಯಲ್ಲಿ ನಾವು ಸಾಹಿತ್ಯವನ್ನು ಹೇಳುವ ಪರಿ ಬದಲಿಸಿಕೊಳ್ಳಬೇಕಿದೆ ಜನ ದೃಶ್ಯ ಮಾಧ್ಯಮದತ್ತ ವಾಲುತ್ತಿರುವಾಗ ಸಾಹಿತ್ಯಕ್ಕೆ ಸಂಗೀತ ಮತ್ತು ದೃಶ್ಯದ ಅಳವಡಿಕೆ ಇಂದಿನ ಕಾಲದಲ್ಲಿ ಅಗತ್ಯವಾಗಿದೆ ಆ ನಿಟ್ಟಿನಲ್ಲಿ ಸೋಮು ಮತ್ತು ಅವರ ತಂಡದ ಪ್ರಯತ್ನ ಅಭಿನಂದನಾರ್ಹವಾದುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾದ ರಾಜೇಶ್ವರಿ ಮೋಪಗಾರ ಮಾತನಾಡಿ, ಚಿತ್ರ ಕಲಾವಿದರು ತಮ್ಮ ಲಲಿತ ಕಲೆಗಳ ಮೂಲಕ ಭಾವನೆಗಳನ್ನು ಕಟ್ಟಿಕೊಟ್ಟರೆ ಕವಿ ಸಾಹಿತ್ಯದ ಮೂಲಕ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತಾನೆ. ಚಲನಚಿತ್ರ ನಿರ್ದೇಶಕ ಭಾವನೆಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಾನೆ. ಪ್ರಸ್ತುತ ಸಂದರ್ಭದಲ್ಲಿ ವಿಜಯಪುರ ಕನ್ನಡ ಅಲ್ಬಮ್ ಸಾಂಗ್ ಉದಾಹರಣೆಯಾಗಿದೆ ಎಂದರು.
ಈ ಸಂದರ್ಭ ಕವಿ ಸೋಮು ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಗೀತಾ ಸನದಿ, ಮುರುಗೇಶ ಸಂಗಮ, ಭೀಮರಾವ ಉಪ್ಪಾರ, ಭರತಕುಮಾರ ಎಚ್.ಟಿ., ಕಲ್ಲಪ್ಪ ಶಿವಶರಣ, ಲಕ್ಷ್ಮೀ ಗೋಡೆಕರ, ಪ್ರಶಾಂತ ಬಿಳೆಭಾವಿ, ಜಯಶ್ರೀ ಚಲವಾದಿ, ಮಲ್ಲಿಕಾರ್ಜುನ ನಾಟೀಕಾರ, ಧಾನೇಶ್ವರಿ ಆಲಾಳೆ, ಶಿವಾಜಿ ಮೋರೆ, ರೇಣುಕಾ ಕೋಟ್ಯಾಳ ಅವರು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಇದೇ ಸಂದರ್ಭ ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟಗಾರರಾದ ನೀಲಾಂಬಿಕಾ ಕಟ್ಟಿಮನಿ, ಶಿವರಂಜಿನಿ ಉಪ್ಪಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಗುರು ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದ ಗಾನ ಬನದ ಪಂಡಿತ ತೋಂಟದಾರ್ಯ ಕವಿಗವಾಯಿಗಳು ವೇದಿಕೆಯಲ್ಲಿ ಇದ್ದರು.
ಕಾರ್ಯಕ್ರಮದಲ್ಲಿ ಅಲ್ಬಾಮ್ ಸಾಂಗ್ ನಲ್ಲಿ ಅಭಿನಯಿಸಿದ ಕಲಾವಿದರು ಹಾಗೂ ಗಾನಬದನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಮಲಾಬಾಯಿ ಹಿಪ್ಪರಗಿ, ಲಕ್ಷ್ಮೀ ಸೇಜಾಳ, ದುಂಡಮ್ಮ ಹಿಪ್ಪರಗಿ, ರಾಮನಗೌಡ ಚೌಧ್ರಿ,
ಶ್ರೀಕಾಂತ ಮೆಂಡೆಗಾರ, ಭೀಮರಾಯ ಕುಂಟೋಜಿ, ಪ್ರಕಾಶ ಚೌಧ್ರಿ, ಆನಂದ ಕುಂಟೋಜಿ, ಎ.ಎಚ್.ಕೊಳಮಲಿ, ಶರಣಗೌಡ ಪಾಟೀಲ, ಉಮೇಶ ಶಿವಶರಣ, ದೀಪಕ ಶಿಂಧೆ, ಸೋಮಶೇಖರ ಕುರ್ಲೆ, ವಿನೋದ ಪಟ್ಟಣದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಮೇಶ ಶಿವಶರಣ ಸ್ವಾಗತಿಸಿದರು. ಮುರುಗೇಶ ಸಂಗಮ ನಿರೂಪಿಸಿದರು. ಕಲ್ಲಪ್ಪ ಶಿವಶರಣ ವಂದಿಸಿದರು.






















