
ವಡಗೇರಾ: ಜೂ.8:ತಾಲೂಕಿನ ಬಸವ ನಗರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ಇಬ್ಬರು ಬಾಲಕಿಯರು ಹಾಗೂ ಅವರನ್ನು ರಕ್ಷಿಸಲು ಮುಂದಾದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಗುಂಡಮ್ಮ (35), ಸುಜಾತ (9) ಮತ್ತು ಶಿವಲೀಲಾ (10) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಇಲ್ಲದ ಕಾರಣ ಬಟ್ಟೆ ತೊಳೆಯಲು ಮರಮ್ ಕ್ವಾರಿ ತೆಗ್ಗಿನ ಬಳಿ ತೆರಳಿದ್ದ ವೇಳೆ ಬಾಲಕಿಯರಾದ ಸುಜಾತ ಹಾಗೂ ಶಿವಲೀಲಾ ಕಾಲು ಜಾರಿ ಆಳವಾದ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಗುಂಡಮ್ಮ ನೀರಿಗೆ ಧುಮುಕಿದರೂ, ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ಬಸವನಗರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತದೇಹಗಳನ್ನು ಶವಪರೀಕ್ಷೆಗಾಗಿ ಮುದ್ನಾಳ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸುದ್ದಿ ತಿಳಿದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಪಾಯಕಾರಿ ಪ್ರದೇಶದಲ್ಲಿ ಸೂಕ್ತ ಭದ್ರತಾ ಕ್ರಮಗಳ ಕೊರತೆಯಿಂದ ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಹಾಗೂ ಕ್ವಾರಿ ಪ್ರದೇಶಗಳಿಗೆ ರಕ್ಷಣಾ ಬೇಲಿ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.






















