
ಹುಣಸೂರು,ಮೇ.೨೩-ದುಬಾರೆ ಆನೆ ದುರಂತದಿಂದ ಎಚ್ಚೆತ್ತ ಅರಣ್ಯ ಇಲಾಖೆ ಸಫಾರಿಗೆ ಕ್ಯಾಂಪರ್ ವಾಹನಗಳ ಬದಲು ಆದಷ್ಟು ಬಸ್ ಬಳಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿಧಾಮಗಳ ಸಫಾರಿಯಲ್ಲಿ ತೆರೆದ ಕ್ಯಾಂಪರ್ ಬದಲಿಗೆ ಸುರಕ್ಷಿತ ಬಸ್ ಬಳಕೆ ಮಾಡಬೇಕು. ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಸೇರಿದಂತೆ ರಾಜ್ಯದ ವಿವಿಧ ವನ್ಯಜೀವಿಧಾಮಗಳಲ್ಲಿ ಈವರೆಗೆ ಸಫಾರಿ ಪ್ರದೇಶಗಳಲ್ಲಿ ಆನೆಗಳು, ಹುಲಿಗಳು ಸೇರಿದಂತೆ ಯಾವುದೇ ವನ್ಯಮೃಗಗಳು ಸಫಾರಿ ವಾಹನಗಳ ಮೇಲೆ ದಾಳಿ ಮಾಡಿ ಜೀವಹಾನಿ ಮಾಡಿದ ಘಟನೆಗಳು ಸಂಭವಿಸಿರುವುದಿಲ್ಲ.
ಆದರೂ, ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು, ಇನ್ನು ಮುಂದೆ ತೆರೆದ ಕ್ಯಾಂಪರ್ ವಾಹನಗಳ ಬದಲಿಗೆ ಸಂಪೂರ್ಣ ಸುರಕ್ಷಿತವಾದ ಬಸ್ ಸಫಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಲಿ ಬಳಕೆಯಲ್ಲಿರುವ ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳುಗಳಿಂದ ಕೂಡಿದ ಬಲಿಷ್ಠ ಜಾಲರಿಗಳನ್ನು ಅಥವಾ ಒಡೆಯಲಾಗದ ಗಾಜು ಅಳವಡಿಸಬೇಕು. ಸಫಾರಿ ವಾಹನದಲ್ಲಿ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಸಫಾರಿ ಕೇಂದ್ರಗಳಿಗೆ ಸಮೀಪದಲ್ಲಿ ಆಂಬುಲೆನ್ಸ್ ವಾಹನ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಈಶ್ವರ ಬಿ ಖಂಡ್ರೆ ತಿಳಿಸಿದರೆನಲಾಗಿದೆ.

























