Home ಮುಖಪುಟ ಸುದ್ದಿ ಜೂ.೧ರಿಂದ ಹೊಸ ಕೋರ್ಟ್‌ನಲ್ಲಿ ನಟ ದರ್ಶನ್ ಕೇಸ್ ವಿಚಾರಣೆ

ಜೂ.೧ರಿಂದ ಹೊಸ ಕೋರ್ಟ್‌ನಲ್ಲಿ ನಟ ದರ್ಶನ್ ಕೇಸ್ ವಿಚಾರಣೆ

ಬೆಂಗಳೂರು,ಮೇ.೨೩- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಪ್ರತಿಯನ್ನು ದರ್ಶನ್ ಪರ ವಕೀಲರು ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ಅಧಿಕೃತವಾಗಿ ಸಲ್ಲಿಸಿದ್ದಾರೆ.


ಈ ಆದೇಶದ ಅನ್ವಯ, ಪ್ರಕರಣದ ತ್ವರಿತಗತಿ ವಿಚಾರಣೆ ನಡೆಸುವ ಹಾಗೂ ಆರೋಪಿಗಳಿಗೆ ಒದಗಿಸಬೇಕಾದ ಕನಿಷ್ಠ ಸೌಲಭ್ಯಗಳ ಮಾರ್ಗಸೂಚಿಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಸೆಷನ್ಸ್ ನ್ಯಾಯಾಲಯವು ಮುಂದಿನ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.


ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ತ್ವರಿತಗತಿ ತನಿಖೆಗೆ ಕಟ್ಟುನಿಟ್ಟಿನ ಗಡುವು ವಿಧಿಸಿದ್ದು, ಮುಂಬರುವ ಒಂದು ವರ್ಷದ ಅವಧಿಯಲ್ಲಿ ಪ್ರಕರಣದ ಪ್ರಮುಖ ೬೦ ಸಾಕ್ಷಿಗಳ ವಿಚಾರಣೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದೆ.


ಇದೇ ವೇಳೆ ರಾಜ್ಯದ ಪೊಲೀಸ್ ಠಾಣಾವಾರು ಸೆಷನ್ಸ್ ಕೋರ್ಟ್‌ಗಳ ಹೊಸ ನಿಯೋಜನೆ ಪ್ರಕ್ರಿಯೆ ನಡೆದಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ಕೇಸ್‌ಗಳ ಹಂಚಿಕೆಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಇದರ ಅನ್ವಯ, ಈವರೆಗೆ ಇಂಚಾರ್ಜ್ ಕೋರ್ಟ್‌ನಲ್ಲಿ ನಡೆಯುತ್ತಿದ್ದ ರೇಣುಕಾಸ್ವಾಮಿ ಕೊಲೆ ಕೇಸಿನ ಒಟ್ಟು ವಿಚಾರಣೆಯು ಮುಂಬರುವ ಜೂನ್ ೧ರಿಂದ ಅಧಿಕೃತವಾಗಿ ೫೯ನೇ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಳ್ಳಲಿದ್ದು, ಮಾನ್ಯ ನ್ಯಾಯಾಧೀಶರಾದ ಸುಜಾತಾ ಎಂ. ಸಾಮ್ರಾಣಿ ಅವರ ನೇತೃತ್ವದಲ್ಲಿ ಈ ಹೈಪ್ರೊಫೈಲ್ ಕೊಲೆ ಪ್ರಕರಣದ ಅಸಲಿ ಟ್ರಯಲ್ ಮತ್ತು ಸಾಕ್ಷಿ ವಿಚಾರಣೆಗಳು ಜರುಗಲಿದೆ.


ಮತ್ತೊಂದೆಡೆ, ಇದೇ ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದು ಹೊರಗಿರುವ ಐದು ಜನ ಆರೋಪಿಗಳ ಜಾಮೀನನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್, ಸದ್ಯ ತನ್ನ ತೀರ್ಪನ್ನು ಕಾಯ್ದಿರಿಸಲಾಗಿದೆ.


ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಹೈಕೋರ್ಟ್‌ಗೂ ಸಹ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ಸಲ್ಲಿಕೆ ಮಾಡಲಾಗಿದೆ. ಮುಂಬರುವ ಸೋಮವಾರದಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ ಹಂತದ ವಿಚಾರಣೆ ನ್ಯಾಯಾಲಯದಲ್ಲಿ ನಿಗದಿಯಾಗಿದ್ದು, ಅಂದು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ೫೯ನೇ ಸೆಷನ್ಸ್ ಕೋರ್ಟ್ ಕೈಗೊಳ್ಳಲಿರುವ ಮುಂದಿನ ಕ್ರಮಗಳು ಹಾಗೂ ಹೈಕೋರ್ಟ್‌ನಲ್ಲಿ ಕಾಯ್ದಿರಿಸಲಾಗಿರುವ ಐದು ಜನ ಆರೋಪಿಗಳ ಜಾಮೀನು ರದ್ದತಿ ಅರ್ಜಿಯ ಭವಿಷ್ಯದ ದೃಷ್ಟಿಯಿಂದ ಸೋಮವಾರದ ಕೋರ್ಟ್ ಕಲಾಪ ಇಡೀ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.