Home ಜಿಲ್ಲೆ ಬೆಂಗಳೂರು ಕೆ.ಜಿ.ಎಫ್‌ನಲ್ಲಿ ನ್ಯಾಯಾಲಯದ ಆದೇಶ ಪಾಲಿಸಿ ಸಾಗುವಳಿ ಚೀಟಿ ನೀಡಲು ತಹಶೀಲ್ದಾರ್ ಮುಂದಾಗಬೇಕು: ಪ್ರಕಾಶ್ ರೆಡ್ಡಿ ಒತ್ತಾಯ

ಕೆ.ಜಿ.ಎಫ್‌ನಲ್ಲಿ ನ್ಯಾಯಾಲಯದ ಆದೇಶ ಪಾಲಿಸಿ ಸಾಗುವಳಿ ಚೀಟಿ ನೀಡಲು ತಹಶೀಲ್ದಾರ್ ಮುಂದಾಗಬೇಕು: ಪ್ರಕಾಶ್ ರೆಡ್ಡಿ ಒತ್ತಾಯ

oplus_0

ಕೆ.ಜಿ.ಎಫ್, ನ.೧೧-ನ್ಯಾಯಾಲಯ ನೀಡಿರುವ ಆದೇಶವನ್ನು ಗೌರವಿಸಿ, ಅದರಂತೆ ನಿಗದಿತ ಅವಧಿಯೊಳಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಲು ತಹಶೀಲ್ದಾರ್ ಕ್ರಮ ಕೈಗೊಳ್ಳಬೇಕು ಎಂದು ಕೆಆರ್‌ಎಸ್ ಪಕ್ಷದ ಮುಖಂಡ ಹಾಗೂ ಅಲ್ಲಿಕಲ್ಲು ಗ್ರಾಮದ ನಿವಾಸಿ ಪ್ರಕಾಶ್ ರೆಡ್ಡಿ ಒತ್ತಾಯಿಸಿದ್ದಾರೆ.


ಅಲ್ಲಿಕಲ್ಲು ಗ್ರಾಮದ ಸರ್ವೆ ನಂಬರ್ ೫೯ರಲ್ಲಿರುವ ಮೂರು ಎಕರೆ ಜಮೀನಿನಲ್ಲಿ ತಮ್ಮ ಕುಟುಂಬ ಕಳೆದ ೫೦ ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೂ, ಗ್ರಾಮದ ಬೋಡರೆಡ್ಡಿ ಮತ್ತು ಅವರ ಕುಟುಂಬದವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.


ಅಲ್ಲಿಕಲ್ಲು ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ತಂದೆ ಅಪ್ಪಾಜಿ ರೆಡ್ಡಿ ಅವರು ’ಬಗರ್ ಹುಕುಂ’ ಯೋಜನೆಯಡಿ ನಮೂನೆ ೫೦ರ ಅಡಿಯಲ್ಲಿ ಈ ಮೂರು ಎಕರೆ ಜಮೀನು ಮಂಜೂರು ಕೋರಿ ೧೯೯೧ರಲ್ಲಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು ಎಂದರು. ಈ ಅರ್ಜಿಯ ಆಧಾರದ ಮೇಲೆ ಕಂದಾಯ ಇಲಾಖೆಯ ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರ್ ಸಿದ್ಧಪಡಿಸಿದ್ದರು ಎಂದು ತಿಳಿಸಿದ ಅವರು, ತಮ್ಮ ತಂದೆ ಎಷ್ಟು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು ಎಂಬುದನ್ನು ಸ್ಥಳ ಪರಿಶೀಲನೆ ಮೂಲಕ ಗುರುತಿಸಿ, ಬ್ಲಾಕ್ ನಂಬರ್ ೪ ಎಂದು ದಾಖಲೆ ತಯಾರಿಸಿ ಜಮೀನು ಮಂಜೂರು ಮಾಡುವಂತೆ ಶಿಫಾರಸು ಮಾಡಿದ್ದರು ಮತ್ತು ಈ ಶಿಫಾರಸಿನ ಆಧಾರದ ಮೇಲೆ ಜಮೀನು ಮಂಜೂರುಗೊಂಡ ಅಧಿಕೃತ ಸಮಿತಿಯೂ ಅನುಮೋದನೆ ನೀಡಿತ್ತು ಎಂದು ವಿವರಿಸಿದರು.

ಆದರೆ ನಂತರ ತಮ್ಮ ತಂದೆಯ ಜಮೀನಿಗೆ ಸಂಬಂಧಿಸಿದ ಕಡತವನ್ನು ಕೆಲವು ಅಧಿಕಾರಿಗಳು ಮುಚ್ಚಿಟ್ಟ ಪರಿಣಾಮ ಅದು ಲಭ್ಯವಾಗದೆ ಸಮಸ್ಯೆ ಉಂಟಾಯಿತು ಎಂದು ಆರೋಪಿಸಿದ ಪ್ರಕಾಶ್ ರೆಡ್ಡಿ, ತಮ್ಮ ತಂದೆ ಎತ್ತುಗಳನ್ನಿಟ್ಟುಕೊಂಡು ಸುಮಾರು ೫೦ ವರ್ಷಗಳಿಂದ ಸದರಿ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಅವರಿಗೆ ಅನಾರೋಗ್ಯ ಉಂಟಾದ ನಂತರ ತಾವೇ ಜಮೀನಿನಲ್ಲಿ ಉಳುಮೆ ಮುಂದುವರಿಸಿ ಪ್ರಸ್ತುತ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇವೆ ಹಾಗೂ ಕುಟುಂಬದ ಜೀವನಾಧಾರವಾಗಿರುವ ಈ ಜಮೀನಿನ ವಿಚಾರದಲ್ಲಿ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.


ತಮ್ಮ ತಂದೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಕಡತವನ್ನು ಹೊರಗೆ ತರಲು ಸಾಕಷ್ಟು ಹೋರಾಟ ನಡೆಸಿ ಕೊನೆಗೆ ತಾಲೂಕು ಕಚೇರಿಯ ಅಧಿಕಾರಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದ ಅವರು, ಈ ದಾಖಲೆಗಳೇ ತಮ್ಮ ತಂದೆಯವರು ಹಲವು ವರ್ಷಗಳ ಹಿಂದೆ ಜಮೀನಿಗಾಗಿ ಅರ್ಜಿ ಸಲ್ಲಿಸಿ, ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮತ್ತು ಶಿಫಾರಸು ಮಾಡಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದರು. ಈ ಭಾಗದಲ್ಲಿ ರೈತರು ಪರಸ್ಪರ ಜಗಳವಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲು ಹಿಂದಿನ ಗ್ರಾಮ ಲೆಕ್ಕಾಧಿಕಾರಿ ಚಂದ್ರು ಅವರೇ ಕಾರಣ ಎಂದು ಆರೋಪಿಸಿದ ಪ್ರಕಾಶ್ ರೆಡ್ಡಿ, ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಜಮೀನು ಮಂಜೂರು ಮತ್ತು ಕಂದಾಯ ದಾಖಲೆಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಕಳೆದ ಐದು ದಶಕಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದು ಕಂದಾಯ ಇಲಾಖೆಯ ಜವಾಬ್ದಾರಿಯಾಗಿದ್ದು, ಈ ಪ್ರಕರಣದಲ್ಲಿ ಜಿಲ್ಲಾ ಆಡಳಿತ ಮತ್ತು ಹಿರಿಯ ಕಂದಾಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.