
ಮಾಲೂರು, ನ. ೧೧: ಕಾಲ ಬದಲಾದರೂ ಕೆಲವು ಕೃಷಿ ಪರಂಪರೆಗಳು ಮಾತ್ರ ತಮ್ಮ ವೈಶಿಷ್ಟ್ಯವನ್ನು ಉಳಿಸಿಕೊಂಡು ಇರುತ್ತವೆ. ಅಂತಹ ಅಪರೂಪದ ಪರಂಪರೆಯನ್ನು ಮೂರು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವವರು ತಾಲ್ಲೂಕಿನ ನಿಧರಮಂಗಲ ಗ್ರಾಮದ ರೈತ ನಾಗಪ್ಪ ಹಾಗೂ ಅವರ ಕುಟುಂಬ.
ನಾಗಪ್ಪ ಅವರ ತಾತ ಬೈರಪ್ಪ ಅವರು ಸುಮಾರು ಎರಡು ಎಕರೆ ಜಮೀನಿನಲ್ಲಿ ವೀಳ್ಯದೆಲೆ ಬೆಳೆ ಆರಂಭಿಸಿದ್ದರು. ಆ ಕಾಲದಲ್ಲಿ ತಿಪ್ಪೆಗೊಬ್ಬರ, ಕುರಿಗೊಬ್ಬರ ಬಳಸಿ, ಏತ ನೀರಾವರಿ, ಬಕೆಟ್ ಪದ್ಧತಿ ಹಾಗೂ ನಂತರ ಪಂಪ್ಸೆಟ್ ಮೂಲಕ ನೀರು ಹರಿಸಿ ಬೆಳೆ ಪೋಷಿಸುತ್ತಿದ್ದರು. ಅವರು ಹಾಕಿದ ಅಡಿಪಾಯವನ್ನು ಮುಂದುವರಿಸಿಕೊಂಡು ಬಂದಿರುವ ನಾಗಪ್ಪ ಅವರು ಇಂದಿಗೂ ವೀಳ್ಯದೆಲೆ ಬೆಳೆಯನ್ನು ಸಂರಕ್ಷಿಸಿ ಬೆಳೆಸುತ್ತಿದ್ದಾರೆ.
ಪ್ರಸ್ತುತ ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರ, ತಿಪ್ಪೆ ಹಾಗೂ ಕುರಿಗೊಬ್ಬರ ಬಳಸಿ ಪರಿಸರ ಸ್ನೇಹಿ ಕೃಷಿ ನಡೆಸುತ್ತಿದ್ದಾರೆ. ವೀಳ್ಯದೆಲೆ ಬೆಳೆಯಲ್ಲಿ ವರ್ಷಕ್ಕೊಮ್ಮೆ ಮರಕ್ಕೆ ಹತ್ತಿರುವ ಅಂಬನ್ನು ಅರ್ಧಕ್ಕೆ ಇಳಿಸಿ, ಮತ್ತೆ ಭೂಮಿಯಲ್ಲಿ ನೆಟ್ಟು ಹೊಸ ಬೆಳೆಯನ್ನು ಆರಂಭಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡಿದ್ದಾರೆ. ಪ್ರತಿದಿನವೂ ವೀಳ್ಯದೆಲೆಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ರವಾನಿಸುವ ಮೂಲಕ ಕುಟುಂಬದ ಆದಾಯವನ್ನು ಸ್ಥಿರವಾಗಿ ಉಳಿಸಿಕೊಂಡಿದ್ದಾರೆ.
ತಾಲೂಕಿನಲ್ಲಿ ವೀಳ್ಯದೆಲೆ ಬೆಳೆಯುವ ರೈತರ ಸಂಖ್ಯೆ ಅತ್ಯಂತ ವಿರಳವಾಗಿದೆ. ವಿಶೇಷವಾಗಿ ಟ್ರಕಲ್ ಹೋಬಳಿಯಲ್ಲಿ ನಾಗಪ್ಪ ಅವರ ಕುಟುಂಬವನ್ನು ಹೊರತುಪಡಿಸಿ ವೀಳ್ಯದೆಲೆ ಬೆಳೆಗಾರರು ಬಹುತೇಕ ಇಲ್ಲದಂತಾಗಿದೆ. ಶುಭ ಹಾಗೂ ಅಶುಭ ಸಮಾರಂಭಗಳಲ್ಲಿಯೂ ವೀಳ್ಯದೆಲೆಗೆ ವಿಶೇಷ ಮಹತ್ವವಿರುವುದರಿಂದ ಇದನ್ನು “ಲಕ್ಷ್ಮೀ ಬೆಳೆ” ಎಂದೂ ಕರೆಯಲಾಗುತ್ತದೆ.
ನಾಗಪ್ಪ ಅವರು ಕೇವಲ ವೀಳ್ಯದೆಲೆಗೆ ಸೀಮಿತವಾಗದೇ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ತಮ್ಮ ತೋಟದಲ್ಲಿರುವ ಕೊಳವೆಬಾವಿಗಳು ಹಾಗೂ ಮೂರು ಕೃಷಿ ಹೊಂಡಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಕಬ್ಬು, ರಾಗಿ, ಭತ್ತ, ಬಾಳೆ, ಹಿಪ್ಪ ನೇರಳೆ ಸೊಪ್ಪು, ಕಲ್ಲಂಗಡಿ, ಶುಂಠಿ, ಜೋಳ ಹಾಗೂ ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಇದರೊಂದಿಗೆ ಕುರಿ ಸಾಕಣೆ, ಮೇಕೆ ಸಾಕಣೆ, ಕೋಳಿ ಸಾಕಾಣಿಕೆ ಹಾಗೂ ರೇಷ್ಮೆ ಹುಳು ಸಾಕಾಣಿಕೆಯನ್ನೂ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ತಮ್ಮ ತೋಟದಲ್ಲಿ ಬೆಳೆಯುವ ಹಿಪ್ಪ ನೇರಳೆ ಸೊಪ್ಪು ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಕುಟುಂಬದ ಸುಮಾರು ಹತ್ತು ಮಂದಿ ಸದಸ್ಯರು ತೊಡಗಿಸಿಕೊಂಡಿದ್ದು, ಹೊರಗಿನಿಂದ ಆರುರಿಂದ ಏಳು ಮಂದಿ ಕಾರ್ಮಿಕರಿಗೂ ಉದ್ಯೋಗ ಒದಗಿಸಿದ್ದಾರೆ. ಟ್ರ್ಯಾಕ್ಟರ್ ಮತ್ತು ಎತ್ತುಗಳ ನೆರವಿನಿಂದ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಅವರ ಸಾಧನೆಗೆ ಕೃಷಿ ಇಲಾಖೆ ಮತ್ತು ಸರ್ಕಾರದಿಂದ ಹಲವಾರು ಪ್ರಶಸ್ತಿಗಳು ಲಭಿಸಿವೆ. ಸಮಗ್ರ ಕೃಷಿ ಪದ್ಧತಿ ಮೂಲಕ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಿರುವ ನಾಗಪ್ಪ ಅವರು ತಾಲೂಕಿನ ಇತರ ರೈತರಿಗೆ ಮಾದರಿಯಾಗಿದ್ದಾರೆ.
“ಒಂದೇ ಬೆಳೆ ಮೇಲೆ ಅವಲಂಬಿತ ವಾಗಿರುವುದಕ್ಕಿಂತ ಹಲವು ಬೆಳೆಗಳನ್ನು ಬೆಳೆಯುವುದು ಸುರಕ್ಷಿತ. ಒಂದು ಬೆಳೆಯಲ್ಲಿ ನಷ್ಟವಾದರೂ ಮತ್ತೊಂದು ಬೆಳೆ ನಮ್ಮನ್ನು ಕಾಪಾಡುತ್ತದೆ,” ಎಂದು ನಾಗಪ್ಪ ಅವರು ಹೇಳುತ್ತಾರೆ. ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕಿ ದಿವ್ಯ ಅವರ ಪ್ರಕಾರ, ಇಲಾಖೆಯ ಮಾರ್ಗದರ್ಶನ, ಸಲಹೆ ಮತ್ತು ತಾಂತ್ರಿಕ ಸೂಚನೆಗಳನ್ನು ಅನುಸರಿಸಿ ನಾಗಪ್ಪ ಅವರು ಯಶಸ್ವಿ ರೈತರಾಗಿ ಹೊರಹೊಮ್ಮಿದ್ದಾರೆ. ಅವರ ತೋಟಕ್ಕೆ ಭೇಟಿ ನೀಡುವ ಮೂಲಕ ಇತರ ರೈತರು ಸಹ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮೂರು ತಲೆಮಾರುಗಳಿಂದ ವೀಳ್ಯದೆಲೆ ಬೆಳೆಯನ್ನು ಉಳಿಸಿಕೊಂಡು, ಆಧುನಿಕ ತಂತ್ರಜ್ಞಾನ ಮತ್ತು ಸಮಗ್ರ ಕೃಷಿಯ ಸಮನ್ವಯದ ಮೂಲಕ ಯಶಸ್ಸು ಸಾಧಿಸಿರುವ ನಾಗಪ್ಪ ಅವರ ಕೃಷಿ ಜೀವನ, ಇಂದಿನ ರೈತ ಸಮುದಾಯಕ್ಕೆ ಪ್ರೇರಣೆಯ ಮಾದರಿಯಾಗಿದೆ.
























