Home ಜಿಲ್ಲೆ ಬೆಂಗಳೂರು ಕರ್ನಾಟಕದಲ್ಲಿ ಮಳೆ ವಿರಾಮ: ಕೆಲವು ಕಡೆಗಳಲ್ಲಷ್ಟೇ ಹಗುರ ಮಳೆ

ಕರ್ನಾಟಕದಲ್ಲಿ ಮಳೆ ವಿರಾಮ: ಕೆಲವು ಕಡೆಗಳಲ್ಲಷ್ಟೇ ಹಗುರ ಮಳೆ

ಬೆಂಗಳೂರು, ನ. ೧೧-ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದ್ದು, ಬಹುತೇಕ ಕಡೆಗಳಲ್ಲಿ ಒಣಹವೆ ಹಾಗೂ ಮೋಡಕವಿದ ವಾತಾವರಣ ಮುಂದುವರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಂಗಳವಾರವೂ ಸೇರಿದಂತೆ ಮುಂದಿನ ೨೪ ಗಂಟೆಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಾಗುವ ಲಕ್ಷಣಗಳಿಲ್ಲ. ಕರಾವಳಿ ಮತ್ತು ಉತ್ತರ ಒಳನಾಡು ಸೇರಿದಂತೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನವೇ ಇರಲಿದೆ.


ಮಲೆನಾಡು ಮತ್ತು ಕರಾವಳಿ ಭಾಗಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಯಿದ್ದರೆ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಆದರೆ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಒಣಹವೆ ಮುಂದುವರಿಯಲಿದೆ.


ರಾಜಧಾನಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಶೇ. ೧೦ ಕ್ಕಿಂತ ಕಡಿಮೆಯಿದೆ. ನಗರದಲ್ಲಿ ಕನಿಷ್ಠ ತಾಪಮಾನ ೧೮ಲಿಸಿ ಯಿಂದ ೧೯ಲಿಸಿ ಹಾಗೂ ಗರಿಷ್ಠ ತಾಪಮಾನ ೨೮ಲಿಸಿ ವರೆಗೆ ದಾಖಲಾಗುವ ಸಾಧ್ಯತೆಯಿದೆ. ಮುಂದಿನ ಕೆಲ ದಿನಗಳ ಕಾಲ ಅಂದರೆ ನವೆಂಬರ್ ೧೨ ರಂದು ಗರಿಷ್ಠ ೨೮ಲಿಸಿ ಹಾಗೂ ಕನಿಷ್ಠ ೧೬ಲಿಅ ಮತ್ತು ನವೆಂಬರ್ ೧೩ ರಂದು ಗರಿಷ್ಠ ೨೮ಲಿಸಿ ಹಾಗೂ ಕನಿಷ್ಠ ೧೭ಲಿಸಿ ತಾಪಮಾನದೊಂದಿಗೆ ಭಾಗಶಃ ಬಿಸಿಲು ಮತ್ತು ಮೋಡಕವಿದ ಹವಾಮಾನ ಇರಲಿದೆ.


ಮುಂದಿನ ಐದು ದಿನಗಳವರೆಗೆ ರಾಜ್ಯದ ಬಹುತೇಕ ಕಡೆ ಒಣಹವೆ ಇರಲಿದ್ದರೂ, ನವೆಂಬರ್ ೧೫ ರಿಂದ ಮತ್ತೆ ಮಳೆ ಚೇತರಿಸಿಕೊಳ್ಳುವ ಸೂಚನೆಯಿದೆ. ನವೆಂಬರ್ ೧೫ ಮತ್ತು ೧೬ ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನುಳಿದಂತೆ ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತ ಮತ್ತು ಒಣ ಹವಾಮಾನವೇ ಮುಂದುವರಿಯಲಿದೆ.