
ಸಂಜೆವಾಣಿ ವಾರ್ತೆ,
ವಿಜಯಪುರ, ಜು.೧೦: ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀ ಹರಳಯ್ಯ ಸ್ವಾಮೀಜಿಯವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಹಾಗೂ ಬಳಿಕ ಪೊಲೀಸ್ ಠಾಣೆಯೊಳಗೆ ನುಗ್ಗಿ ಮತ್ತೊಮ್ಮೆ ಕೊಲೆ ಯತ್ನ ನಡೆಸಿರುವ ಘಟನೆ ಖಂಡನೀಯ ಎಂದು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ) ವಿಜಯಪುರ ಜಿಲ್ಲಾಧ್ಯಕ್ಷ ನಾಗರಾಜ ಕಬಾಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪೊಲೀಸ್ ಠಾಣೆಯಂತಹ ಸುರಕ್ಷಿತ ಸ್ಥಳದಲ್ಲಿಯೇ ಧಾರ್ಮಿಕ ಮುಖಂಡರ ಜೀವಕ್ಕೆ ಅಪಾಯ ಉಂಟಾಗಿರುವುದು ಪೊಲೀಸ್ ಇಲಾಖೆಯ ಕಾರ್ಯ ವೈಖರಿಯ ವೈಫಲ್ಯವನ್ನು ತೋರಿಸುತ್ತದೆ. ಸಾರ್ವಜನಿಕರ ರಕ್ಷಣೆಯ ಹೊಣೆ ಹೊತ್ತಿರುವ ಇಲಾಖೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ ತರುವಂತಹ ಈ ಘಟನೆ ರಾಜ್ಯದ ಕಾನೂನು ಸುವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ ಎಂದು ಹೇಳಿದರು.
ಹಲ್ಲೆ ನಡೆಸಿದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ, ಕೊಲೆ ಯತ್ನ ಸೇರಿದಂತೆ ಅನ್ವಯವಾಗುವ ಕಠಿಣ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಕರ್ತವ್ಯ ಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ನಿಷ್ಪಕ್ಷಪಾತ ಇಲಾಖಾ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರಕರಣದ ಕುರಿತು ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ಘಟನೆಗೆ ಕಾರಣರಾದ ಎಲ್ಲ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಶ್ರೀ ಹರಳಯ್ಯ ಸ್ವಾಮೀಜಿಯವರಿಗೆ ಸೂಕ್ತ ಭದ್ರತೆ ಒದಗಿಸಿ, ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದಲ್ಲಿ, ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ) ವತಿಯಿಂದ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಾಗರಾಜ ಕಬಾಡೆ ಎಚ್ಚರಿಸಿದ್ದಾರೆ.































