
ಆಳಂದ: ಪಟ್ಟಣದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಣೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, 84,500 ಮೌಲ್ಯದ ಟಂಟಂ ವಾಹನ ಮತ್ತು ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಹಿಂದಿನ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಅಮಾನತುಗೊಂಡ ಘಟನೆ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಪಟ್ಟಣದ ಉಮರ್ಗಾ ರಸ್ತೆಯ ಕುಮಾರ ಹೋಟೆಲ್ ಸಮೀಪ ಅ.24ರಂದು ಸಂಜೆ 7.30ರ ವೇಳೆಗೆ ಕೆಎ-32-7333 ಸಂಖ್ಯೆಯ ಟಂಟಂ ವಾಹನ ನಿಂತಿರುವುದನ್ನು ಗಮನಿಸಿದ ಆಳಂದ ಪೊಲೀಸ್ ಠಾಣೆಯ ಸಿಬ್ಬಂದಿ ಚಂದ್ರಶೇಖರ (ಹೆಡ್ ಕಾನ್ಸ್ಟೆಬಲ್-277) ಅವರು ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ 15 ಚೀಲ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿ ಸಾರ್ವಜನಿಕರಿಗೆ ಪಡಿತರ ಚೀಟಿಗಳ ಮೂಲಕ ವಿತರಿಸುವ ಸರ್ಕಾರಿ ಅಕ್ಕಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಹನವನ್ನು ಠಾಣೆಗೆ ತರಿಸಿ, ಆಹಾರ ಇಲಾಖೆಯ ಅಧಿಕಾರಿಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿತ್ತು.
ಆಳಂದ ಆಹಾರ ನಿರೀಕ್ಷಕಿ ಶ್ರೀದೇವಿ ಮಠಪತಿ ಅವರು ಅ.25ರಂದು ಪೊಲೀಸ್ ಠಾಣೆಗೆ ಭೇಟಿ ನೀಡಿ, ಪಂಚರ ಸಮಕ್ಷಮದಲ್ಲಿ ಅಕ್ಕಿ ಚೀಲಗಳನ್ನು ಪರಿಶೀಲಿಸಿ ಜಪ್ತಿ ಪಂಚನಾಮೆ ನಡೆಸಿದ್ದಾರೆ. ಬಳಿಕ ಅಕ್ಕಿ ಹಾಗೂ ವಾಹನವನ್ನು ತೂಕ ಮಾಡಿಸಲಾಗಿದ್ದು, ಒಟ್ಟು 15 ಚೀಲಗಳಲ್ಲಿದ್ದ ಅಕ್ಕಿಯ ನಿವ್ವಳ ತೂಕ 700 ಕೆ.ಜಿ. ಎಂದು ದಾಖಲಿಸಲಾಗಿದೆ. ಅಕ್ಕಿಯ ಅಂದಾಜು ಮೌಲ್ಯ ರೂಪಾಯಿ 24,500 ಆಗಿದ್ದು, ಟಂಟಂ ವಾಹನದ ಅಂದಾಜು ಮೌಲ್ಯ 60 ಸಾವಿರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಕ್ಕಿ ಚೀಲಗಳನ್ನು ಸರ್ಕಾರಿ ಉಗ್ರಾಣಕ್ಕೆ ಸಾಗಿಸಿ, ಉಗ್ರಾಣ ವ್ಯವಸ್ಥಾಪಕರಿಗೆ ಒಪ್ಪಿಸಲಾಗಿದೆ. ಅಕ್ಕಿ ಮತ್ತು ವಾಹನದ ಒಟ್ಟು ಅಂದಾಜು ಮೌಲ್ಯ ₹84,500 ಆಗಿದೆ. ಈ ಸಂಬಂಧ ಜಪ್ತಿ ಪಂಚನಾಮೆ ಹಾಗೂ ತೂಕದ ರಸೀದಿಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ.
ಹಿಂದಿನ ಪ್ರಕರಣದ ಬೆನ್ನಲ್ಲೇ ಮತ್ತೊಂದು ಘಟನೆ:
ಹಿಂದಿನ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಅಮಾನತುಗೊಂಡ ಘಟನೆ ಇನ್ನೂ ಸಾರ್ವಜನಿಕ ಚರ್ಚೆಯಲ್ಲಿರುವಾಗಲೇ ಮತ್ತೊಂದು ಅಕ್ಕಿ ಪ್ರಕರಣ ಪತ್ತೆಯಾಗಿರುವುದು ಮಹತ್ವ ಪಡೆದಿದೆ. ಪಡಿತರ ವ್ಯವಸ್ಥೆಯ ಅಕ್ಕಿ ಅಕ್ರಮವಾಗಿ ಸಾಗಣೆಯಾಗುತ್ತಿದೆಯೇ, ಅದರ ಮೂಲ ಯಾವುದು ಮತ್ತು ಸಾಗಣೆಯ ಹಿಂದಿರುವವರು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಆದರೆ, ಜಪ್ತಿಯಾದ ಅಕ್ಕಿ ಪಡಿತರ ಅಕ್ಕಿಯೇ ಎಂಬುದು ಹಾಗೂ ಅದನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತೇ ಎಂಬುದು ತನಿಖೆಯಿಂದ ಖಚಿತವಾಗಬೇಕಿದೆ. ವಾಹನದ ಚಾಲಕನ ಗುರುತು ಮತ್ತು ಅಕ್ಕಿಯ ಮೂಲದ ಕುರಿತು ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
























