
ತಿಪಟೂರು, ಮೇ ೧೧- ವಿದ್ಯಾರ್ಥಿಗಳು ಕನ್ನಡ ಚಲನಚಿತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಮೂಲಕ ಕನ್ನಡ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಚಿತ್ರನಟ ಜಯಂತ್ ಹೇಳಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸಾಂಸ್ಕೃತಿಕ ಉತ್ಸವ ?ಕಲೋತ್ಸವ-೨೦೨೬? ಅಂಗವಾಗಿ ನಡೆದ ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆ ಸಿಗುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ. ಆತ್ಮವಿಶ್ವಾಸ ಹಾಗೂ ಪರಿಶ್ರಮದೊಂದಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಎಸ್. ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜು ಮಾತನಾಡಿ, ವಿದ್ಯಾರ್ಥಿಗಳ ಸಾಂಸ್ಕೃತಿಕ ಆಸಕ್ತಿ ಶ್ಲಾಘನೀಯವಾಗಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿಗಳು ಸಾಧನೆ ಮಾಡಲು ಸಂಸ್ಥೆಯ ವತಿಯಿಂದ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ವಿ.ಎಸ್. ಅಧ್ಯಕ್ಷರಾದ ಪಿ.ಕೆ. ತಿಪ್ಪೇರುದ್ರಪ್ಪ, ಉಪಾಧ್ಯಕ್ಷರಾದ ಜಿ.ಪಿ. ದೀಪಕ್, ಉಮಾಶಂಕರ್, ಉಮೇಶ್, ಟಿ.ಎಸ್. ಬಸವರಾಜು, ಕಾರ್ಯದರ್ಶಿ ಬಿ.ಎಸ್.ಎಂ.ಆರ್. ಸಂಗಮೇಶ್, ಸುಧಾಕರ್ ಹೆಚ್.ಜಿ., ಟಿ.ಯು. ಜಗದೀಶಮೂರ್ತಿ, ಖಜಾಂಚಿಗಳಾದ ಟಿ.ಎಸ್. ಶಿವಪ್ರಸಾದ್, ಪ್ರಾಂಶುಪಾಲರಾದ ಡಾ. ಹೆಚ್.ಸಿ. ಸತೀಶ್‌ಕುಮಾರ್, ನಟ ಸುಧಾಕರ್ ಗೌಡ ಮತ್ತಿತರರು ಉಪಸ್ಥಿತರಿದ್ದರು.


























