Home ಜಿಲ್ಲೆ ಕಲಬುರಗಿ ಬೋಗಸ್ ದಾಖಲೆಯಡಿ ಭೂ ಒಡೆತನ ಯೋಜನೆ ಸೌಲಭ್ಯ: ತನಿಖೆಗೆ ಜೈ ಕನ್ನಡಿಗರ ಸೇನೆ ಆಗ್ರಹ

ಬೋಗಸ್ ದಾಖಲೆಯಡಿ ಭೂ ಒಡೆತನ ಯೋಜನೆ ಸೌಲಭ್ಯ: ತನಿಖೆಗೆ ಜೈ ಕನ್ನಡಿಗರ ಸೇನೆ ಆಗ್ರಹ

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಮಖಂಡಿ ಗ್ರಾಮದಲ್ಲಿ ಬೋಗಸ್ ದಾಖಲಾತಿ ಪಡೆದು ಭೂ ಒಡೆತನ ಯೋಜನೆಯಡಿ ಜಮೀನು ಮಂಜೂರು ಮಾಡಿರುವ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೈ ಕನ್ನಡಿಗರ ಸೇನೆ ಜಿಲ್ಲಾ ಸಮಿತಿಯ ವತಿಯಿಂದ ಕಲಬುರಗಿಯ ನೂತನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ದತ್ತು ಹೆಚ್. ಭಾಸಗಿ ನೇತೃತ್ವದಲ್ಲಿ ನೂತನ ಜಿಲ್ಲಾಧಿಕಾರಿಯನ್ನು ಸನ್ಮಾನಿಸಿ ಸ್ವಾಗತಿಸಲಾಯಿತು, ನಂತರ ಸಲ್ಲಿಸಲಾದ ಮನವಿಯಲ್ಲಿ, ಭೂ ಒಡೆತನ ಯೋಜನೆಯಡಿ ಕೆಲವರು ಸಫಾಯಿ ಕರ್ಮಚಾರಿಗಳೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿ ಭೂ ಒಡೆತನ ಯೋಜನೆಯ ಸೌಲಭ್ಯ ಪಡೆದಿದ್ದಾರೆ ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಮನವಿಯಲ್ಲಿ ದೂರಲಾಗಿದೆ.
ಈ ಕುರಿತು ಈ ಹಿಂದೆಯೇ ಕೆಲವು ಸಂಘಟನೆ ಸಂಬಂಧಿಸಿದ ನಿಗಮಕ್ಕೆ ದೂರು ನೀಡಿದ್ದರೂ ಜಿಲ್ಲಾ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಒಂದೇ ಗ್ರಾಮದಲ್ಲಿ ಆರು ಜನ ಫಲಾನುಭವಿಗಳಿಗೆ ಭೂ ಒಡೆತನ ಯೋಜನೆಯಡಿ ಜಮೀನು ನೋಂದಣಿ ಮಾಡಿರುವುದು ಸರ್ಕಾರಕ್ಕೆ ವಂಚನೆ ಮಾಡುವಂತಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಹೀಗಾಗಿ, ಬೋಗಸ್ ಫಲಾನುಭವಿಗಳ ನೋಂದಣಿ ರದ್ದುಪಡಿಸಿ ನಿಜವಾದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ತಪ್ಪು ದಾಖಲೆ ನೀಡಿದ ಅಧಿಕಾರಿಗಳು, ಬೀಳವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬೋಗಸ ದಾಖಲೆ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.