Home ಜಿಲ್ಲೆ ತುಮಕೂರು ಬದುಕು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ

ಬದುಕು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ

ಮಧುಗಿರಿ, ಮೇ ೧೨- ರಾಷ್ಟ್ರದ ಎಲ್ಲ ಭಾಷೆಗಳಿಗಿಂತಲೂ ಅತಿ ಹೆಚ್ಚು ಅಂದರೆ ೮ ಜ್ಞಾನ ಪೀಠ ಪ್ರಶಸ್ತಿ ಪಡೆದ ಕೀರ್ತಿ ನಮ್ಮ ಕನ್ನಡ ಭಾಷೆಗಿದೆ. ಇಂತ ಜ್ಞಾನಪೀಠ ಪ್ರಶಸ್ತಿ ಪಡೆದ ಎಲ್ಲ ಮಹಾನೀಯರು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿಯೇ ಓದಿ ಬೆಳೆದು ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ನಮ್ಮ ನಾಡಿಗಷ್ಟೆ ಅಲ್ಲ, ಇಡೀ ದೇಶಕ್ಕೆ ಗೌರವ ತಂದಿದ್ದಾರೆ. ಕನ್ನಡ ತಾಯಿ ಕೀರ್ತಿ ಪತಾಕೆಯನ್ನು ಮೆರೆದಿದ್ದಾರೆ. ಅವರ ಬದುಕೆ ನಮಗೆ ಸ್ಪೂರ್ತಿ, ಮಾರ್ಗದರ್ಶನ. ಇದನ್ನು ನಾವು ಎಂದಿಗೂ ಮರೆಯಬಾರದು ಎಂದು ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ವಿ. ಟಿ ರಾಮಕೃಷ್ಣಯ್ಯ ಹೇಳಿದರು.


ಕನ್ನಡ ಸಾಹಿತ್ಯ ಪರಿಷತ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಬೆಂಗಳೂರು ನಗರ ಜಿಲ್ಲೆ ಮದುಗಿರಿ ಕಾರಾಗೃಹದಲ್ಲಿ ಏರ್ಪಡಿಸಿದ್ದ ವಿಶೇಷ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾವು ಯಾರು ಪರಭಾಷೆ ದ್ವೇಷಿಗಳಲ್ಲ. ಕನ್ನಡ ಭಾಷೆಗೆ ಮೊದಲ ಆಧ್ಯತೆ. ರಾಷ್ಟ್ರಕ್ಕೆ ಸಂವಿಧಾನವನ್ನು ರಚಿಸಿಕೊಟ್ಟ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಇಲ್ಲಿ ಸ್ಮರಿಸಲೇ ಬೇಕು. ಜತೆಗೆ ಜಾತಿಯತೆಯ ವಿರುದ್ಧ ಸಮರ ಸಾರಿದ ಬಸವಣ್ಣ ಹಾಗೂ ಜಗತ್ತಿಗೆ ಶಾಂತಿ ಸಂದೇಶ ಭೋದಿಸಿದ ಭಗವಾನ್ ಬುದ್ಧ, ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಮಹಾತ್ಮಗಾಂಧೀಜಿ ಇನ್ನೂ ಮುಂತಾದ ಮಹನೀಯರನ್ನು ಪಡೆದ ಪುಣ್ಯ ಭೂಮಿ ನಮ್ಮ ಹೆಮ್ಮೆಯ ಭಾರತ ಎಂಬುದನ್ನು ಮರೆಯಬಾರದು ಎಂದರು.


ಇಂತಹ ಹೆಮ್ಮೆಯ ತುಮಕೂರು ಜಿಲ್ಲೆಯ ಮಧುಗಿರಿಯ ಕಾರಾಗೃಹದಲ್ಲಿ ವಿಶೇಷ ಕನ್ನಡ ಸಾಹಿತ್ಯ ಸಮ್ಮೇಳವನ್ನು ಆಯೋಜಿಸಿರುವುದು ಹಾಗೂ ಕಾರಾಗೃಹದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಇಡೀ ದೇಶದಲ್ಲಿಯೇ ಇದು ಮೊದಲನೆಯದು ಎಂದು ಪ್ರಶಂಸಿದರು


ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕವಿ ಹಾಗೂ ವಕೀಲ ಬಿದಲೋಟಿ ರಂಗನಾಥ್ ಮಾತನಾಡಿ, ಕಾವ್ಯಕ್ಕೆ ಮನುಷ್ಯನನ್ನು ಪರಿವರ್ತಿಸುವ ಶಕ್ತಿ ಇದೆ. ಕಾವ್ಯವು ಅನುಭಾವದ ಅಭಿವ್ಯಕ್ತಿ. ಕೆಟ್ಟ ವ್ಯವಸ್ಥೆ ವಿರುದ್ದ ಧ್ವನಿ ಎತ್ತುವಲ್ಲಿ ಕವಿಗಳು ಶ್ರಮಿಸಬೇಕು. ಕಾವ್ಯ ಆಳುವ ವರ್ಗವನ್ನು ಮೆಚ್ಚಿಸುವಂತಿರಬಾರದು. ಆತ್ಮಾವಲೋಕನ ಮತ್ತು ಬದ್ದತೆಯಿಂದ ಕೈದಿಗಳು ಕವಿಗಳಾಗಬಹುದು. ಪಶ್ಚಾತಾಪ ಬದಲಾವಣೆಯ ದಾರಿ ದೀಪವಾಗುತ್ತದೆ. ಕಾವ್ಯ ಕೇವಲ ಕಲ್ಪನ ಶಕ್ತಿಯಾಗಿ ಅಲ್ಲ ಅದು ನೈತಿಕ ಶಕ್ತಿ. ಕಾವ್ಯಕ್ಕೆ ಕಾವು ಕೊಟ್ಟು ಕಾದು ಧ್ಯಾನಿಸಿದಾಗ ಮಾತ್ರ ನಿಜವಾದ ಕಾವ್ಯ ಹುಟ್ಟಲು ಸಾಧ್ಯ. ಆ ನಿಟ್ಟಿನಲ್ಲಿ ಹಿರಿಯ ಕವಿಗಳು ಬರೆದ ಪುಸ್ತಕಗಳನ್ನು ಒದಿಕೊಳ್ಳಬೇಕು. ಕವಿತೆ ಅರ್ಥ ಎರಡು ಸಾಲುಗಳ ಖಾಲಿ ಜಾಗದಲ್ಲಿ ಅರ್ಥವಿರಬೇಕು. ಕಾವ್ಯ ಪದಗಳ ಜೋಡಣೆ ಅಲ್ಲ ಎಂದರು


ಕಾರ್ಯ ಕ್ರಮದಲ್ಲಿ ದಾಸರಹಳ್ಳಿ ವಿದಾನಸಭಾಕ್ಷೇತ್ರದ ಕ ಸಾ ಪ ಅಧ್ಯಕ್ಷರಾದ ಲಿಂಗರಾಜು ಎ. ಕಾಳೇನಹಳ್ಳಿ, ಸಾಹಿತಿ ಮ ಲ ನ ಮೂರ್ತಿ. ಕವಿ ಸಿಡದರಗಲ್ಲು ರಂಗನಾಥ್. ಕ ಸಾ ಪ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪ್ರಕಾಶ್ ಮೂರ್ತಿ ಎಂ. ಪುರವರ ಪಿ. ಕೆ ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.