Home ಜಿಲ್ಲೆ ತುಮಕೂರು ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು: ಡಾ. ಮಹಂತೇಶ್

ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು: ಡಾ. ಮಹಂತೇಶ್

ತುಮಕೂರು, ಮೇ ೧೧- ವಿದ್ಯಾರ್ಥಿ ಜೀವನವು ಅತ್ಯಂತ ಮಹತ್ವಪೂರ್ಣವಾದದ್ದು, ವಿದ್ಯಾರ್ಥಿ ದೆಸೆಯಲ್ಲಿದ್ದಾಗ ತಾವು ಅಂದುಕೊಂಡ ಪದವಿ ಹಾಗೂ ಹುದ್ದೆಗಳನ್ನು ಪಡೆಯಬೇಕಾದರೆ ನಿರಂತರ ಶ್ರಮ, ಏಕಾಗ್ರತೆ, ಆಸಕ್ತಿ ಮತ್ತು ದೊಡ್ಡ ಕನಸನ್ನು ಕಾಣಬೇಕು ಎಂದು ಸಮರ್ಥನಂ ಟ್ರಸ್ಟ್‌ನ ಸಂಸ್ಥಾಪಕರಾದ ಡಾ. ಮಹಂತೇಶ್ ಅಭಿಪ್ರಾಯಪಟ್ಟರು.


ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ, ಮತ್ತು ವಾಣಿಜ್ಯ ಕಾಲೇಜು, ತುಮಕೂರು. ಕ್ರೀಡೆ ಎನ್.ಎಸ್.ಎಸ್, ಎನ್.ಸಿ.ಸಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಅಭಿವ್ಯಕ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಐದು ಡಿ ಗಳನ್ನು ಅನುಸರಿಸಬೇಕು, ಡ್ರೀಮ್, ಡಿಸೈರ್, ಡಿಟರ್‍ಮೀನೇಷನ್, ಡೆಡಿಕೇಷನ್, ಡೆಸ್‌ಟಿನಿ ಅದರಿಂದ ಸಮಾಜ ನಿರೀಕ್ಷಿಸುವ ಬಹುದೊಡ್ಡ ವ್ಯಕ್ತಿಗಳಾಗುತ್ತಾರೆ. ಅವರ ವ್ಯಕ್ತಿತ್ವವು ವಿಕಸನವಾಗುತ್ತದೆ ಎಂದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟಿ.ಜಿ ಗಂಗಾಧರಯ್ಯ ಮಾತನಾಡಿ, ನಾಳಿನ ಭವಿಷ್ಯಗಳು ಎಂದರೆ ಅದು ವಿದ್ಯಾರ್ಥಿಗಳು ಭಾರತದ ಉಜ್ವಲ ಭವಿಷ್ಯ ನಿಮ್ಮ ಕೈಯಲ್ಲಿದೆ ಅದಕ್ಕೆ ಅನುಗುಣವಾಗಿ ಶಿಕ್ಷಣವನ್ನು ಪಡೆದು ಸಾರ್ವಜನಿಕ ಜೀವನದಲ್ಲಿ ಮಾದರಿ ವ್ಯಕ್ತಿಗಳಾಗಬೇಕು ಎಂದರು.


ಶ್ರೀ ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕರಾದ ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಪದವಿ ಶಿಕ್ಷಣವು ಪ್ರಮುಖ ಪಾತ್ರ ವಹಿಸಿದೆ. ಪದವಿ ಶಿಕ್ಷಣವನ್ನು ಸಾಮಾನ್ಯವಾಗಿ ಎಲ್ಲರೂ ಪಡೆಯಲೇಬೇಕು. ಆ ನಿಟ್ಟಿನಲ್ಲಿ ಸಿದ್ಧಗಂಗಾ ಸಂಸ್ಥೆಯ ಪಾತ್ರ ಬಹಳ ಮಹತ್ವದ್ದಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದ್ದ ಉನ್ನತ ಶಿಕ್ಷಣದ ಕನಸ್ಸನ್ನು ಸಕಾರಗೊಳಿಸಿದ್ದು ಪರಮ ಪೂಜ್ಯರು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಪಿ.ವೀರಭ್ರದಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸರ್ವಾಂಗೀಣ ಅಭಿವೃದ್ದಿಯಾಗಬೇಕು. ಕಲಿಕೆ ನಿರಂತರವಾಗಿರಬೇಕು, ಆಸಕ್ತಿಯಿಂದ ಎಲ್ಲ ಕ್ಷೇತ್ರಗಳಲ್ಲಿ ಭಾಗವಹಿಸಿ ತಮ್ಮ ಮುಂದಿನ ಗುರಿಯನ್ನು ಸಾಧಿಸಿ ಕಾಲೇಜಿಗೆ ಕೀರ್ತಿ ತರಬೇಕು ಎಂದು ಹೇಳಿದರು. ಮಜಾಭಾರತ ಖ್ಯಾತಿಯ ಜಗಪ್ಪ ಮತ್ತು ಸುಶ್ಮಿತ ರವರು ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು.


ಕಾರ್ಯಕ್ರಮ ಸಂಚಾಲಕರಾದ ಸೌಜನ್ಯ ಜಿ. ಮತ್ತಿತರರು ಭಾಗವಹಿಸಿದ್ದರು.
ಮಧು ಎಸ್. ಕುಮಾರ್ ಸ್ವಾಗತಿಸಿದರು. ಡಾ.ಬಿ. ಆರ್.ಚಂದ್ರಶೇಖರಯ್ಯ ವಂದಿಸಿದರು. ಡಾ. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.