
ಬೀದರ್: ಜೂ.30:ರಾಜ್ಯದ ಪ್ರತಿ ಹಳ್ಳಿಗೂ, ಜಿಲ್ಲೆಗೂ ಸೇರಿ ಇಡೀ ರಾಜ್ಯಾದ್ಯಂತ ‘ಕಾಂಗ್ರೆಸ್ ಹಟಾವೊ, ತಾಂಡಾ ಬಚಾವ’, ಎಂಬ ಅಭಿಯಾನ ಹಮ್ಮಿಕೊಳ್ಳಲಾಗುವುದೆಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಹಿಂದೆ ನಮ್ಮ ಸರ್ಕಾರವಿದ್ದಾಗ. ಮಾಧುಸ್ವಾಮಿ ಅವರ ವರದಿ ಪ್ರಕಾರ ಪರಿಶಿಷ್ಟರಿಗೆ ಶೇಕಡಾ 17 ಪ್ರತಿಶತದಷ್ಟು ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದ್ದರು. ಅದರಲ್ಲಿ ನಮ್ಮ ಸಮಾಜಕ್ಕೆ 4.5 ಪ್ರತಿಶತದಷ್ಟು ಲಮಾಣಿ, ಕೊರವ, ಕೊರಚ, ಭೋವಿ ವಡ್ಡರ್ ಜಾತಿಗಳಿಗೆ ಮೀಸಲಾತಿ ನೀಡಲು ತಿಳಿಸಿದರು. ಆದರೆ ಬಿಜೆಪಿ ಸರ್ಕಾರ ನಮ್ಮ ಜಾತಿಗೆ ಅವಮಾನ ಮಾಡಿದೆ ಎಂದು ರಾಜ್ಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಬಿಜೆಪಿ ಹಟಾವೊ, ತಾಂಡಾ ಬಚಾವ ಎಂದು ಅಪಪ್ರಚಾರ ಮಾಡಿ ಬಿಜೆಪಿ ಪಕ್ಷ ಸೋಲಲ್ಲು ಕಾರಣವಾಯಿತು. ಇದರಿಂದ ನಾವು ಅಧಿಕಾರದಿಂದ ವಂಚಿತರಾಗಲು ಕಾರಣವಾಗಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ನಮ್ಮ ಸಮಾಜಕ್ಕೆ ಸುಳ್ಳು ಆಮೀಶ ತೋರಿಸಿ ಮೋಸ ಮಾಡಿದೆ. ಹೇಳಿದೊಂದು ಮಾಡಿರುವುದು ಮತ್ತೊಂದು ಎಂಬಂತೆ, 17 ಪ್ರತಿಶತ ಇದ್ದ ಮೀಸಲಾತಿ 15 ಪ್ರತಿಶತಕ್ಕೆ ಇಳಿಸಿ, ಸಿ ಕೆಟೆಗರಿಯಲ್ಲಿದ್ದ 4 ಜಾತಿಗಳ ಪಟ್ಟಿಗೆ 59 ಇತರೆ ಜಾತಿಗಳನ್ನು ಸೇರಿಸಿ ಒಳ ಮೀಸಲಾತಿಯಲ್ಲಿ ಮತ್ತೆ ಅದರಲ್ಲೂ ಒಳ ಮೀಸಲಾತಿ ಮಾಡಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರೂದ್ಧ ನಮ್ಮ ಸಮಾಜ ದಂಗೆ ಏಳಬೇಕಾಗಿದೆ ಎಂದರು.
ಮಾಜಿ ಸಚಿವರು ಹಾಗೂ ಔರಾದ್ ಮೀಸಲು ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಒಟ್ಟು 300 ತಾಂಡಾಗಳಿವೆ. ಇಷ್ಟು ಜನಸಂಖ್ಯೆ ಇರುವ ನಮ್ಮ ಸಮಾಜದ ಮೇಲಾದ ಒಳ ಮೀಸಲಾತಿ ಅನ್ಯಾಯ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ರಾಸ್ತಾ ರೋಕೊ, ಜಿಲ್ಲಾಧಿಕಾರಿಗಳಿಗೆ ಮುತ್ತಿಗೆ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಹಿಂಜರಿಯುದಿಲ್ಲ. ಈಗಾಗಲೆ ನಮ್ಮ ಸಮಾಜಕ್ಕೆ ಕರೆ ಕೊಡಲಾಗಿದ್ದು, ಸಂಪೂರ್ಣ ತಾಂಡಾಗಳು ಖಾಲಿ ಆಗಿ ಬೀದರ್ ಚಲೊ ಚಳುವಳಿಯಲ್ಲಿ ಪಾಲ್ಗೊಳ್ಳಬೇಕು. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದರು.
ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ನಾಗಮೋಹನದಾಸ್ ವರದಿ ಮಾಡುವ ಸಂದರ್ಭದಲ್ಲಿ ಅವರಿಗೆ ಏಪ್ರಿಲ, ಮೇ ಹಾಗೂ ಜೂನ್ ತಿಂಗಳಲ್ಲಿ ಸರ್ವೇ ಕಾರ್ಯ ಕೈಬಿಡಬೇಕೆಂದು ವಿನಂತಿಸಲಾಗಿತ್ತು. ಆದರೆ ನಮ್ಮ ಮನವಿಗೆ ಕ್ಯಾರೆ ಎನ್ನಲಿಲ್ಲ. ವೈಜ್ಞಾನಿಕವಾಗಿ ನಾಗಮೋಹನದಾಸ್ ವರದಿ ತಯ್ಯಾರು ಆಗಲಿಲ್ಲ. ಸುಪ್ರಿಮ್ ಕೋರ್ಟ್ ಆದೇಶದ ಪ್ರಕಾರ ಎಂಪೆರಿಟಕಲ್ ಡಾಟಾ ಸಂಪೂರ್ಣವಾಗಿ ಬಹಿರಂಗವಾಗಬೇಕು ಹಾಗೂ ಈಗ ನ್ಯಾಶ್ನಲ್ ಸೆನ್ಸೆಸ್ ನಡೆಯುತ್ತಿದ್ದು, ಅದು ಪೂರ್ಣ ಆದ ಬಳಿಕವೇ ಮೀಸಲಾತಿ ಜಾರಿಯಾಗಬೇಕು ಎಂದವರು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷರಾದ ಬಳಿಕ ನಮ್ಮ ಸಮಾಜಕ್ಕೆ ದೊಡ್ಡ ಅನ್ಯಾಯವಾಗಿದೆ. ರಾಜ್ಯ ಮಂತ್ರಿ ಮಂಡಲದಲ್ಲಿ ನಮ್ಮ ಸಮಾಜದ ಒಬ್ಬ ಶಾಸಕನೂ ಮಂತ್ರಿ ಆಗದೇ ಇರುವುದು ದೊಡ್ಡ ದುರಂತ. ಪಕ್ಕದ ಮಹಾರಾಷ್ಟ್ರದಲ್ಲಿ ನಮ್ಮ ಸಮಾಜದ ಇಬ್ಬರು ಶಾಸಕರು ಮಂತ್ರಿಗಳಾಗಿದ್ದಾರೆ. ಕಾಂಗ್ರೆಸ್ ಸದಾ ನಮ್ಮ ಸಮಾಜಕ್ಕೆ ತುಳಿಯುತ್ತಲ್ಲೆ ಬಂದಿದ್ದು, ಹೊಸ ಮುಖ್ಯಮಂತ್ರಿಗಳು ಇದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಲಿಂಬಾ ನಾಯಕ, ಸಮಾಜದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗೋಪಾಲಸಿಂಗ ರಾಠೋಡ, ಬಂಜಾರಾ ಸಮಾಜದ ಅಧ್ಯಕ್ಷ ಬಸವರಾಜ ಪವಾರ, ಮುಖಂಡರಾದ ಸಚಿನ್ ರಠೋಡ್, ಮಂಜುನಾಥ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
























