Home ಜಿಲ್ಲೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಶ್ರೀ ಗುರು ಪ್ರಸನ್ನ ಶಾಲೆ ದಿಟ್ಟ ಹೆಜ್ಜೆ : ವೀರೇಶ್ವರ...

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಶ್ರೀ ಗುರು ಪ್ರಸನ್ನ ಶಾಲೆ ದಿಟ್ಟ ಹೆಜ್ಜೆ : ವೀರೇಶ್ವರ ಮಹಾಸ್ವಾಮೀಜಿ

ವಡಗೇರಾ:ಮಾ.೨: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಮಾನ ಶಿಕ್ಷಣಾವಕಾಶ ಕಲ್ಪಿಸುವ ಮೂಲಕ ಸಮಾಜದಲ್ಲಿ ಜ್ಞಾನಜ್ಯೋತಿ ಬೆಳಗಿಸುತ್ತಿರುವ ಶ್ರೀ ಗುರು ಪ್ರಸನ್ನ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ರೀ ವೀರೇಶ್ವರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ಶೈಕ್ಷಣಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, “ಶಿಕ್ಷಣವೇ ವ್ಯಕ್ತಿಯ ನಿಜವಾದ ಆಸ್ತಿ. ಮಕ್ಕಳು ಭವಿಷ್ಯದ ಶಿಲ್ಪಿಗಳು. ಅವರಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಮಾನವೀಯತೆ, ಶಿಸ್ತು ಮತ್ತು ಸಂಸ್ಕಾರಗಳನ್ನು ಬೆಳೆಸಿಕೊಡಬೇಕು” ಎಂದು ಸಲಹೆ ನೀಡಿದರು. ಪಾಲಕರು ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವುದಕ್ಕಿಂತ ಅವರ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜಮುಖಿ ನಾಯಕರು, ಶಿಕ್ಷಕರ ಸಮರ್ಪಿತ ಸೇವೆಯೇ ಶಾಲೆಯ ಯಶಸ್ಸಿನ ಹಿನ್ನಲೆ ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ವಿದ್ಯಾರ್ಥಿಗಳಿಗೆ ನಗರ ಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಶಾಲೆ ಕೈಗೊಂಡಿರುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶಾಲಾ ಅಧ್ಯಕ್ಷೆ ಶ್ರೀಮತಿ ರೆಖಾ ಎಂ. ಪೂಜಾರಿ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಭವಿಷ್ಯದ ಯೋಜನೆಗಳನ್ನು ಹಂಚಿಕೊAಡರು. ಕಾರ್ಯದರ್ಶಿ ಮಲ್ಲಿಕಾರ್ಜುನ್ ಪೂಜಾರಿ ವಾರ್ಷಿಕ ವರದಿ ಮಂಡಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳ ಸಾಧನೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಮೆಚ್ಚಿನ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ಸಂಗೀತ ಹಾಗೂ ನಾಟಕ ಪ್ರದರ್ಶನಗಳು ಸಮಾರಂಭಕ್ಕೆ ವಿಶೇಷ ಕಳೆ ತಂದವು.
ಪಟ್ಟಣದ ಗಣ್ಯರು, ಪಾಲಕರು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.