
ಬೆಂಗಳೂರು ಜು. ೨- ರಾಜ್ಯದ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಭೀಕರ ಬರಗಾಲದ ಆತಂಕದಲ್ಲಿದ್ದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ ಇನ್ನೂ ಕುಂಭಕರ್ಣ ನಿದ್ರೆಯಲ್ಲೇ ಮುಳುಗಿದೆ ಎಂದು ಪ್ರತಿಪಕ್ಷ ನಾಯಕರು ಅಶೋಕ್ ಟೀಕಿಸಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಮುಂಗಾರು ಕೈಕೊಟ್ಟಿದೆ. ಜಲಾಶಯಗಳು ಬರಿದಾಗುತ್ತಿವೆ. ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ರೈತರಿಗಿಂತ ಅಧಿಕಾರ, ರಾಜಕೀಯ, ಭ್ರಷ್ಟಾಚಾರವೇ ಮುಖ್ಯವಾಗಿದೆ. ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ೧೫೦ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಬೆಳಗಾವಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಲಾಶಯಗಳು ಬರಿದಾಗುತ್ತಿದ್ದು, ಕುಡಿಯುವ ನೀರಿನ ಬಿಕ್ಕಟ್ಟು ಆರಂಭವಾಗಿದೆ ಮುಂಗಾರು ಮಳೆ ತೀವ್ರ ಕೊರತೆಯಿಂದ ಕೃಷಿ ಬಿತ್ತನೆ ಕುಂಠಿತಗೊಂಡಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಬರ ಘೋಷಣೆಗೆ ಅಗತ್ಯವಿರುವ ಎಲ್ಲ ಸೂಚ್ಯಂಕಗಳು ಸ್ಪಷ್ಟವಾಗಿದ್ದರೂ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಎಂದು ಆಸಮಧಾನ ಹೊರಹಾಕಿದ್ದಾರೆ
ಇಂತಹ ಗಂಭೀರ ಪರಿಸ್ಥಿತಿಯಲ್ಲೂ ರಾಜ್ಯಕ್ಕೆ ಪೂರ್ಣಾವಧಿ ಕೃಷಿ ಸಚಿವರೇ ಇಲ್ಲ! ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕಿರುವ ಕಾಳಜಿ ಇದೇನಾ ಮುಖ್ಯಮಂತ್ರಿ ಶಿವಕುಮಾರ್ ಅವರೇ, ರಾಜ್ಯದ ಜನತೆಗೆ ಉತ್ತರಿಸಿ! ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಇದುವರೆಗೆ ಒಂದೇ ಒಂದು ಬರ ಪರಿಶೀಲನಾ ಸಭೆಯನ್ನೂ ನಡೆಸಿಲ್ಲ. ನಿಮ್ಮ ಸರ್ಕಾರಕ್ಕೆ ಪರಿಸ್ಥಿತಿಯ ಗಂಭೀರತೆಯ ಅರಿವೇ ಇಲ್ಲವೇ?
ಕೃಷಿ ಕಾರ್ಮಿಕರ ವಲಸೆ ತಡೆಯಲು ರಾಜಕೀಯ ಬದಿಗಿಟ್ಟು ವಿವಿಜಿ ರಾಮ್ ಜಿ ಯೋಜನೆಯನ್ನು ಸಮರೋಪಾದಿಯಲ್ಲಿ ಜಾರಿಗೆ ತರಲು ಏಕೆ ಮೀನ ಮೇಷ ಎಣಿಸುತ್ತಿದ್ದೀರಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವ ಕಾಮಗಾರಿಗಳನ್ನು ತಕ್ಷಣ ಆರಂಭಿಸಲು ನಿಮ್ಮ ಸರ್ಕಾರಕ್ಕೆ ಅಡ್ಡಿಯಾಗಿರುವುದು ಏನು ಎಂದು ಪ್ರಶ್ನಿಸಿದ್ದಾರೆ



























